

ನೆಲಮಂಗಲ:ನಕಲಿ ಸಹಿ ಮಾಡಿ 50 ಲಕ್ಷ ರೂ.ಹಣ ಲಪಟಾಯಿಸಿ ತಲೆ ಮರೆಸಿಕೊಂಡಿರುವ ವೈದ್ಯನೊಬ್ಬನ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪಾಲುದಾರರು ಪ್ರಕರಣ ದಾಖಲಿಸಿದ್ದಾರೆ. ನಗರದ ಖಾಸಗಿ ವೈದ್ಯ ಡಾ.ಶ್ರೀನಿವಾಸ್(47) ತಲೆಮರೆಸಿಕೊಂಡ ಆರೋಪಿ.ಮೂರ್ನಾಲ್ಕು ವರ್ಷಗಳಿಂದ ಡಾ.ಶ್ರೀನಿವಾಸ್ ಮತ್ತು ಈತನ ಸ್ನೇಹಿತ ಡಾ.ಕಿರಣ್ ಷೇರುದಾರರಾಗಿ ಖಾಸಗಿ ಆಸ್ಪತ್ರೆ ಆರಂಭಿಸಿದ್ದರು. ಆರಂಭದಲ್ಲಿ ಇಬ್ಬರು ಚೆನ್ನಾಗಿಯೇ ಇದ್ದರು. ಆದರೆ ಇತ್ತೀಚೆಗೆ ಸ್ನೇಹದಲ್ಲಿ ಬಿರುಕು ಮೂಡಿತ್ತು. ಇದರಿಂದಾಗಿ ಪಾಲುದಾರಿಕೆ ಪತ್ರದಲ್ಲಿನ ಷರತ್ತು ಉಲ್ಲಂಸಿ ಡಾ.ಕಿರಣ್ ಅವರ ಸಹಿ ನಕಲು ಮಾಡಿ ಮೇ 10ರಂದು ಡಾ.ಶ್ರೀನಿವಾಸ್ 15 ಲಕ್ಷ, ಮೇ 17ರಂದು 35 ಲಕ್ಷ ರೂ. ಗಳನ್ನು ಬ್ಯಾಂಕ್‌ನಿಂದ ಮತ್ತೊಂದು ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಡಾ.ಕಿರಣ್ ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸರಿಗೆ ಯಾಮಾರಿಸಿದ ವೈದ್ಯ: ಡಾ.ಕಿರಣ್ ಮೇ 30ರಂದು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಜೂ.10ರಂದು ಪೊಲೀಸರು ಬಂಧಿಸಲು ಆಸ್ಪತ್ರೆಗೆ ತೆರಳಿದ್ದ ವೇಳೆ ಹಿಂಬದಿ ಬಾಗಿಲಿನಿಂದ ಶ್ರೀನಿವಾಸ್ ಪರಾರಿಯಾಗಿದ್ದಾನೆ. 2022ರ ಜೂ.13ರಂದು ಡಾ.ಶ್ರೀನಿವಾಸ್ ಆಸ್ಪತ್ರೆ ನಡೆಸುವ ಜವಾಬ್ದಾರಿಯನ್ನು ಡಾ.ಕಿರಣ್‌ಗೆ ನೀಡಿ ಆಡಳಿತದಿಂದ ಹೊರ ಬಂದಿದ್ದು, ಪಾಲುದಾರಿಕೆ ಹಣ ನೀಡುವಂತೆ ಡಾ.ಕಿರಣ್ ಅವರನ್ನು ಕೇಳಿದ್ದರು. ಆದರೆ ಕಿರಣ ಹಣ ನೀಡದ ಹಿನ್ನೆಲೆಯಲ್ಲಿ ಸಹಿ ನಕಲು ಮಾಡಿ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.