

ಟಿ. ಶ್ರೀನಿವಾಸ್ ಹೊನ್ನಾಳಿ
ಮನೆ ಕೆಲಸ ಬಿಟ್ಟು ಬೇರಾವ ಕೆಲಸವೂ ಇಲ್ಲದಿದ್ದಾಗ, ಮನೆ ಪಕ್ಕದಲ್ಲೇ ಇದ್ದ ಜಮೀನಿನ ಕಡೆ ಗಮನ ಹರಿಸಿ ಕೃಷಿಯಲ್ಲಿ ಏನನ್ನಾದರೂ ಮಾಡಬೇಕು ಎಂಬ ಸಂಕಲ್ಪ ತೊಟ್ಟು ಅದರಲ್ಲಿ ಕ್ರಿಯಾಶೀಲರಾಗಿ ಹೊಸ ಹೊಸ ಪದ್ಧತಿ ಹಾಗೂ ಆವಿಷ್ಕಾರಗಳನ್ನು ಅಳವಡಿಸಿಕೊಂಡು ಸಾಫಲ್ಯ ಪಡೆದ ಮಹಿಳೆ ಈಗ ಕೃಷಿ ಕ್ಷೇತ್ರದ ಸಾಧಕಿಯಾಗಿ ಹೊರಹೊಮ್ಮಿದ್ದಾರೆ.
ಹೊನ್ನಾಳಿ ತಾಲೂಕಿನ ತಿಮ್ಮೇನಹಳ್ಳಿ ಗ್ರಾಮದ ಪ್ರಗತಿಪರ ರೈತ ಮಹಿಳೆ ಮಂಜುಳಾದೇವಿ 50 ಗುಂಟೆ ಜಮೀನಿನಲ್ಲಿ ಸಮಗ್ರ ಕೃಷಿ ಮಾಡಿ ಲಕ್ಷಾಂತರ ರೂ. ಲಾಭಗಳಿಸುತ್ತಿದ್ದಾರೆ. ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ.
ಜಮೀನಿನಲ್ಲಿ 800 ಅಡಕೆ, 600 ಕಾಫಿ, 200 ಏಲಕ್ಕಿ, 100 ಕಾಳುಮೆಣಸು, 100 ಬಾಳೆಗಿಡಗಳನ್ನು ಮತ್ತು ಅಂತರ ಬೆಳೆಯಾಗಿ ಅಂಜೂರ, ಸೇಬು, ರಾಮಫಲ, ಲಕ್ಷ್ಮಣ ಫಲ, ಹಲಸಿನ ಹಣ್ಣು ಸೇರಿ ವಿವಿಧ ರೀತಿಯ ಹಣ್ಣುಗಳು ಹಾಗೂ ಬೀನ್ಸ್, ಟೊಮ್ಯಾಟೊ, ಬದನೆ, ಅವರೆ ಸೇರಿ ವಿವಿಧ ಬಗೆಯ ತರಕಾರಿಗಳನ್ನು ಬೆಳೆದಿದ್ದಾರೆ. ಜತೆಗೆ 150-175 ಕೋಳಿ, 50 ಕುರಿ ಮತ್ತು 15 ಆಕಳನ್ನು ಸಾಕಿದ್ದಾರೆ. ಒಟ್ಟಾರೆಯಾಗಿ ಸಮಗ್ರ ಕೃಷಿ ಮತ್ತು ಹೈನುಗಾರಿಕೆಯಿಂದ ವಾರ್ಷಿಕ 10 ರಿಂದ 15 ಲಕ್ಷ ರೂ. ಲಾಭಗಳಿಸುವ ಇವರು ಎಲ್ಲ ಮಹಿಳೆಯರಿಗೆ ಆದರ್ಶವಾಗಿದ್ದಾರೆ. ಕೃಷಿ ನಂಬಿ ಪ್ರಾಮಾಣಿಕವಾಗಿ ಬೇಸಾಯ ಮಾಡಿದರೆ ಭೂತಾಯಿ ನಮ್ಮನ್ನು ಕೈ ಬಿಡುವುದಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಮಂಜುಳಾದೇವಿ ಅವರಿಗೆ ಕೃಷಿ ಚಟುವಟಿಕೆಗಳಲ್ಲಿ ಅವರ ಪತಿ ರಂಗರಾವ್ ಹಾಗೂ ಇಬ್ಬರು ಮಕ್ಕಳು ಸಾಥ್ ನೀಡಿದ್ದಾರೆ. ಜಮೀನಿನಲ್ಲೇ ಮನೆ ಮಾಡಿಕೊಂಡು ಕೃಷಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಸಾವಯವ ಕೃಷಿ ಪದ್ಧತಿ: ರಾಸಾಯನಿಕರ ಗೊಬ್ಬರ ಬಳಕೆಯಿಂದ ಭೂಮಿ ಕ್ರಮೇಣ ಬರಡಾಗುತ್ತದೆ ಎಂದು ಸಾಕಿರುವ ಆಕಳು, ಕೋಳಿ ಹಾಗೂ ಕುರಿ ಗೊಬ್ಬರ ಮತ್ತು ತಿಪ್ಪೆ ಗೊಬ್ಬರ ಹಾಕಿ ಶೂನ್ಯ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಅಲ್ಲದೇ ವೈಜ್ಞಾನಿಕ ಜೇನು ಕೃಷಿ ಆರಂಭಿಸಿರುವ ಇವರು ಹನಿ ನೀರಾವರಿಯನ್ನು ಅಳವಡಿಸಿಕೊಂಡಿದ್ದು ಅಡಕೆ ನರ್ಸರಿಯನ್ನು ಮಾಡಿದ್ದಾರೆ.
ಕೃಷಿತೋ ನಾಸ್ತಿ ದುರ್ಭಿಕ್ಷಂ ಎಂದು ಹಿರಿಯರು ಹೇಳುತ್ತಾರೆ. ಕೃಷಿ ನಮ್ಮನ್ನು ಎಂದಿಗೂ ಕೈಬಿಡುವುದಿಲ್ಲ. ಆದರೆ ಇತ್ತೀಚೆಗೆ ಯುವಕರು ಕೃಷಿ ಬಿಟ್ಟು ನಗರದತ್ತ ಮುಖ ಮಾಡುತ್ತಿದ್ದಾರೆ. ಆದರೆ ನಾನು ಕೃಷಿಯನ್ನೇ ನಂಬಿ ಲಕ್ಷಾಂತರ ರೂ. ಲಾಭಗಳಿಸುತ್ತಿದ್ದೇನೆ. | ಮಂಜುಳಾದೇವಿ, ಪ್ರಗತಿಪರ ರೈತ ಮಹಿಳೆ, ತಿಮ್ಮೇನಹಳ್ಳಿ.
ನಾನು ಶಿಕ್ಷಕನಾಗಿದ್ದರೂ ಕೃಷಿಯಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದೆ. ಆದರೆ ಸಮಯದ ಕೊರತೆಯಿಂದ ಸಾಧ್ಯವಾಗಿಲ್ಲ. ಹಾಗಾಗಿ ಪತ್ನಿ ಕೃಷಿಗೆ ಹೆಚ್ಚು ಒತ್ತು ನೀಡಿ ಕೃಷಿಯಲ್ಲೇ ತೊಡಗಿಸಿಕೊಂಡರು. ಅವರಿಗೆ ನಾವು ಬೆಂಬಲ ನೀಡಿದೆವು. | ರಂಗರಾವ್, ನಿವೃತ್ತ ಶಿಕ್ಷಕ