

ವಿರಾಜಪೇಟೆ: ಕೊಡಗು ಮಾಸ್ಟರ್ಸ್ ಫುಟ್ಬಾಲ್ ಕ್ಲಬ್ ವಿರಾಜಪೇಟೆ 50+ ಕಾಲ್ಚೆಂಡು ಪಂದ್ಯಾಟವನ್ನು ನವೆಂಬರ್ ಅಂತಿಮದಲ್ಲಿ ಆಯೋಜಿಸ ಲಾಗುವುದು ಎಂದು ಕೊಡಗು ಮಾಸ್ಟರ್ಸ್ ಫುಟ್ಬಾಲ್ ಕ್ಲಬ್ ಅಧ್ಯಕ್ಷ ಎಲ್.ಜಿ.ಭಾಸ್ಕರ್ ತಿಳಿಸಿದರು.
ವೃದ್ಧಾಪ್ಯ ಎಂಬುದು ಎಲ್ಲರಿಗೂ ಬರುವ ಸಹಜ ಕ್ರಿಯೆ. ಆದರೆ ಆರೋಗ್ಯ ಹದಗೆಟ್ಟರೆ ಹಾಸಿಗೆ ಹಿಡಿಯುವುದು ಶತಃಸಿದ್ಧ. ಹಾಗಾಗಿ ದೇಹ ಮತ್ತು ಶರೀರವನ್ನು ಸಮತೋಲನದಿಂದ ಕಾಪಾಡುವುದು ಮುಖ್ಯ ಎಂದು ಭಾವಿಸಿ 50+ ಮಾಸ್ಟರ್ಸ್ ಕಪ್ ಕಾಲ್ಚೆಂಡು ಪಂದ್ಯಾಟ ನಡೆಸಲಾಗುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಇದು ದ್ವಿತೀಯ ವರ್ಷವಾಗಿದ್ದು, ನವೆಂಬರ್ 29 ಮತ್ತು 30 ರಂದು ಪಂದ್ಯಾಟ ನಡೆಯಲಿದೆ. ನಗರದ ಸುತ್ತಮುತ್ತಲಿನ ಒಟ್ಟು 6 ಕಿ.ಮಿ. ಅಂತರದಲ್ಲಿರುವ ಕ್ರೀಡಾಪಟುಗಳು ಪಂದ್ಯಾಟದಲ್ಲಿ ಭಾಗವಹಿಸಬಹುದಾಗಿದೆ. ಪಂದ್ಯಾಟದಲ್ಲಿ ಭಾಗವಹಿಸುವ ಪಟುಗಳು ಅಧಾರ್ ಕಾರ್ಡ್ ನೀಡುವುದು ಕಡ್ಡಾಯ. ಕಳೆದ ಬಾರಿ ಪಂದ್ಯಾಟಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದೇ ರೀತಿಯಲ್ಲಿ ಪ್ರಸ್ತುತ ಪಂದ್ಯಾವಳಿಗಳಿಗೆ ಸಾರ್ವಜನಿಕರು ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
ಕೊಡಗು ಮಾಸ್ಟರ್ಸ್ ಫುಟ್ಬಾಲ್ ಕ್ಲಬ್ ಉಪಾಧ್ಯಕ್ಷ ಸಿ.ಕೆ.ಪೃಥ್ವಿನಾಥ್ ಮಾತನಾಡಿ, ನವೆಂಬರ್‌ನಲ್ಲಿ ನಡೆಯುವ ಹೊನಲು-ಬೆಳಕಿನ ಕಾಲ್ಚೆಂಡು ಪಂದ್ಯಾಟ ಎರಡು ದಿನ ನಡೆಯಲಿದೆ. ಈಗಾಗಲೇ ಒಟ್ಟು 8 ತಂಡಗಳು ನೋಂದಣಿ ಮಾಡಿಕೊಂಡಿದೆ. ಹೆಚ್ಚುವರಿಯಾಗಿ ಎರಡು ತಂಡಗಳಿಂದ ಬೇಡಿಕೆ ಬಂದಿದ್ದು ಮುಂದಿನ ದಿನಗಳಲ್ಲಿ ಸಂಸ್ಥೆ ಈ ಬಗ್ಗೆ ನಿರ್ಧರಿಸುತ್ತದೆ ಎಂದು ಹೇಳಿದರು.
ಕ್ಲಬ್ನ ವಿರಾಜಪೇಟೆ ಕಾರ್ಯದರ್ಶಿ ಎಚ್.ಎಂ.ಆನಂದ ಮಾತನಾಡಿ, ಎರಡು ದಿನಗಳ ಕಾಲ ನಡೆಯುವ ಕಾಲ್ಚೆಂಡು ಪಂದ್ಯಾಟಕ್ಕಾಗಿ ಹಬ್ಬದ ರೀತಿಯಲ್ಲಿ ಸಿದ್ಧತೆಗಳು ನಡೆದಿವೆ. ನ.10 ತಂಡಗಳ ನೋಂದಾಣಿಗೆ ಕೊನೆಯ ದಿನ. ಆಟಗಾರರನ್ನು ಬಿಡ್ ಮೂಲಕ ತಂಡಕ್ಕೆ ಸೇರ್ಪಡೆಗೊಳಿಸಲಾಗುತ್ತದೆ. ಎರಡೂ ದಿನ ವಿಶೇಷವಾಗಿ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಪಂದ್ಯಾಟದಲ್ಲಿ ಭಾಗವಹಿಸುವ ಎಲ್ಲ ಕ್ರೀಡಾಪಟುಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುತ್ತದೆ. ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿ, ನಗದು ಪುರಸ್ಕಾರ ಹಾಗೂ ವೈಯಕ್ತಿಕ ಪರಿತೋಷಕ ನೀಡಲಾಗುತ್ತದೆ ಎಂದರು.
ಕ್ಲಬ್‌ನ ವಿರಾಜಪೇಟೆ ಸಹ ಕಾರ್ಯದರ್ಶಿ ಬಿ.ಬಿ.ಪ್ರಕಾಶ್, ನಿರ್ದೇಶಕರಾದ ಮರ್ವಿನ್ ಲೋಬೋ, ಪಿ.ಟಿ.ಅಂತೋಣಿ, ರಾಮಕೃಷ್ಣ (ತಂಬು), ಪಿ.ಕೆ.ಪವಿತ್ರನ್, ರಾಮಕೃಷ್ಣ ಸುದ್ದಿ ಗೋಷ್ಠಿಯಲ್ಲಿದ್ದರು.