ಪುಸ್ತಕ ಮಾರಾಟಕ್ಕೆ ಶೇ.50 ರಿಯಾಯ್ತಿ:ಸಿಎಂ ಸಿದ್ದರಾಮಯ್ಯ ಘೋಷಣೆ

kanaka+
Published on

ಬೆಂಗಳೂರು: ಅಕಾಡೆಮಿ, ಪ್ರಾಧಿಕಾರಗಳಿಂದ ಪ್ರಕಟಿಸುವ ಪುಸ್ತಕಗಳನ್ನು ಶೇ.50 ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಅನುಮತಿ ನೀಡಿರುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದರು.

ಕನ್ನಡ ಮತ್ತು ಸಂಸತಿ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ಆಯೋಜಿಸಿದ್ದ "ಸಂತ ಶ್ರೇಷ್ಠ ಕನಕದಾಸರ ಜಯಂತಿ' ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಾವೇರಿ ಜಿಲ್ಲೆ ಬಂಕಾಪುರದಲ್ಲಿ ಕನಕದಾಸರು ನೆಲೆಸಿದ ಸ್ಥಳವನ್ನು ಅಭಿವೃದ್ಧಿ ಮಾಡುವಂತೆ ಹಾಗೂ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟಕ್ಕೆ ಒಪ್ಪಿಗೆ ನೀಡುವಂತೆ ವೇದಿಕೆಯಲ್ಲೇ ಸಲ್ಲಿಸಿದ ಮನವಿಗೆ ಸಿಎಂ ಅನುಮೋದನೆ ಕೊಟ್ಟರು. ಕೂಡಲೇ ಇವುಗಳನ್ನು ಕಾರ್ಯಗತಗೊಳಿಸುವುದಾಗಿ ಘೋಷಿಸಿದರು.

ಜಾತಿ, ಧರ್ಮದ ಹೆಸರಲ್ಲಿ, ಮೇಲು-ಕೀಳು ತಾರತಮ್ಯ ತ್ಯಜಿಸಿ ಮನುಷ್ಯರನ್ನು ಪ್ರೀತಿಸುವುದೇ ಕನಕದಾಸರಿಗೆ ಸಲ್ಲಿಸುವ ನಿಜವಾದ ಗೌರವ. ಮನುಷ್ಯರನ್ನು ವಿಭಜಿಸುವ ಜಾತಿ& ಧರ್ಮದ ತಾರತಮ್ಯವನ್ನು ಬಸವಾದಿ ಶರಣರು ಮತ್ತು ಕನಕದಾಸರು ವಿರೋಧಿಸಿದ್ದರು. ವಚನ ಚಳವಳಿಗೂ ಮೊದಲು ಜನರಿಗೆ ಅರ್ಥ ಆಗದ ಭಾಷೆಯಲ್ಲಿ ಧರ್ಮ ಪ್ರಚಾರ ನಡೆಯುತ್ತಿತ್ತು. ಜನರಿಗೆ ಅರ್ಥವಾಗದ ಸಂಸತ ಶ್ಲೋಕಗಳನ್ನು ಮುಟ್ಟದ ಬಸವಾದಿ ಶರಣರು ಜನರಿಗೆ ಅರ್ಥವಾಗುವ ಜನರ ಭಾಷೆಯಲ್ಲೆ ಅತ್ಯಂತ ಸರಳವಾಗಿ ಮಾನವೀಯ ಧರ್ಮದ ಬಗ್ಗೆ ಹೇಳಿದ್ದರು. ಮನುಷ್ಯ ನಿರ್ಮಿತ ಜಾತಿ, ಧಾರ್ಮಿಕ ತಾರತಮ್ಯ ಅಳಿಸಲು ಮಾನವೀಯ ಮೌಲ್ಯ ಎತ್ತಿ ಹಿಡಿದರು. ಬಸವಾದಿ ಶರಣರು 12ನೇ ಶತಮಾನದಲ್ಲಿ ಮುನ್ನಡೆಸಿದ ಮಾನವೀಯ ಧರ್ಮವನ್ನು 15ನೇ ಶತಮಾನದಲ್ಲಿ ಕನಕದಾಸರು ಮುಂದುವರಿಸಿದರು ಎಂದು ಸಿಎಂ ಬಣ್ಣಿಸಿದರು.

ಕನಕದಾಸರ ಆಶಯ ಮುಖ್ಯ: ಬುದ್ಧ, ಬಸವ, ಕನಕದಾಸರು ಮತ್ತು ಅಂಬೇಡ್ಕರ್​ ಸೇರಿ ಕೆಲ ಮಹನೀಯರು ಜಾತಿ, ಧರ್ಮದ ಹೆಸರಿನಲ್ಲಿ ನಡೆಯುವ ತಾರತಮ್ಯ ನಿವಾರಿಸಲು ಶ್ರಮಿಸಿದ್ದರು. ಕನಕದಾಸರ 500ನೇ ಜಯಂತ್ಯತ್ಸವವನ್ನು ಆಚರಿಸುವ ಅವಕಾಶ ನನಗೆ ಸಿಕ್ಕಿತ್ತು. ಆ ಸಂದರ್ಭದಲ್ಲಿ ಕೀರ್ತನೆಗಳನ್ನು ಸುಲಭವಾಗಿ ಜನರ ಕೈಗೆ ತಲುಪಿಸುವ ಕಾರ್ಯ ಮಾಡಲಾಗಿತ್ತು. ಕನಕದಾಸರ ಕುರಿತು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ಶರಣರು, ಕನಕದಾಸರು ಸಮಾಜಕ್ಕೆ ಒಳ್ಳೆಯ ಕೊಡುಗೆ ಕೊಟ್ಟಿದ್ದಾರೆ. ಮನುಷ್ಯ, ಮನುಷ್ಯನನ್ನು ಪ್ರೀತಿಸಬೇಕು. ಹಾಗಾಗಿ, ನಮ್ಮ ಸರ್ಕಾರ ಕನಕದಾಸರ ಆಶಯಕ್ಕೆ ತಕ್ಕಂತೆ ಕೆಲಸ ಮಾಡುತ್ತಿದೆ ಎಂದು ಸಿಎಂ ಹೇಳಿದರು.

ವಿದ್ಯಾವಂತರು ಜಾತಿವಾದಿಗಳಾದರೆ ವಿದ್ಯೆಗೆ ಗೌರವ ಬರುತ್ತದೆಯೇ? ಸಂವಿಧಾನ ವಿರೋಧಿಸುವವರು ನಿಜವಾದ ಮನುಷ್ಯ ವಿರೋಧಿಗಳಾಗುತ್ತಾರೆ. ಹಾಗಾಗಿ, ಸಂವಿಧಾನ& ಪ್ರಜಾಪ್ರಭುತ್ವ-ಜಾತ್ಯತಿತತೆ ಬಗ್ಗೆ ಪ್ರತಿಯೊಬ್ಬರೂ ಸ್ಪಷ್ಟತೆ ಬೆಳೆಸಿಕೊಳ್ಳಬೇಕು. ಕನಕಶ್ರೀ ಪ್ರಶಸ್ತಿಗೆ ಜಾತಿ&ಧರ್ಮ ಮುಖ್ಯವಲ್ಲ. ಕನಕದಾಸರ ಸಾಮಾಜಿಕ ಸಂದೇಶದ ಮೇಲೆ ಕೆಲಸ ಮಾಡುವುದಷ್ಟೇ ಮುಖ್ಯ ಎಂದು ಸಿಎಂ ವಿವರಿಸಿದರು.

ಸಾಧಕರಿಗೆ ಪ್ರಶಸ್ತಿ ಪ್ರದಾನ: ಡಾ.ವ್ಯಾಸನಕೆರೆ ಪ್ರಭಂಜನಾಚಾರ್ಯ ಅವರಿಗೆ "ಕನಕಶ್ರೀ' ಪ್ರಶಸ್ತಿ, ಡಾ.ತಾಳ್ತಜೆ ವಸಂತಕುಮಾರ, ಡಾ.ನೀಲಪ್ಪ ಮೈಲಾರಪ್ಪ ಅಂಬಲಿಯವರ, ಡಾ.ಎಚ್​.ಎನ್​.ಮುರಳೀಧರ ಹಾಗೂ ಡಾ.ಜಿ.ವಿ. ಆನಂದಮೂರ್ತಿ ಅವರಿಗೆ "ಕನಕ ಗೌರವ' ಪುರಸ್ಕಾರ ಹಾಗೂ ಡಾ.ಬಿ.ಎಸ್​.ಅನಿಲ್​ ಕುಮಾರ್​, ಡಾ.ಗಣೇಶ್​, ಡಾ.ಎಂ.ಉಮೇಶ್​ ಅವರಿಗೆ "ಕನಕ ಯುವ' ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಲೇಖಕ ಬಂಜಗೆರೆ ಜಯಪ್ರಕಾಶ್​, ಕನಕದಾಸರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸಚಿವ ಶಿವರಾಜ ತಂಗಡಗಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್​.ಎಂ.ರೇವಣ್ಣ, ಶಾಸಕ ರುದ್ರಪ್ಪ ಲಮಾಣಿ ಸೇರಿ, ವಿಧಾನ ಪರಿಷತ್​ ಮುಖ್ಯ ಸಚೇತಕರಾದ ಸಲೀಂ ಅಹ್ಮದ್​ ಇದ್ದರು.

ಕನಕದಾಸರ ಜೀವನ ಚಿನ್ನವಿದ್ದಂತೆ. ಧರ್ಮ ಬಲ್ಲವನು ಮೋಸ ಮಾಡುವವನಲ್ಲ. ಶರಣ, ದಾಸ ಸಾಹಿತ್ಯದಿಂದ ಕನ್ನಡ ವಿಶ್ವಸಾಹಿತ್ಯವಾಗಿ ಬೆಳೆಯಿತು. ಸಮಾಜ ಉಳಿಯಬೇಕೆಂದರೆ ಕೀರ್ತನೆಗಳ ಧ್ವನಿ ಮುದ್ರಿಸಿ ಶಾಲಾ-ಕಾಲೇಜುಗಳಲ್ಲಿ ಪ್ರಸಾರ ಮಾಡಬೇಕು.

| ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ. ಕನಕಶ್ರೀ ಪ್ರಶಸ್ತಿ ಪುರಸ್ಕೃತರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net