ಮೈಲ್ಯಾಕ್ ಉನ್ನತೀಕರಣಕ್ಕೆ 50 ಕೋಟಿ ರೂ. ಯೋಜನೆ: ಮೈಲ್ಯಾಕ್ ಅಧ್ಯಕ್ಷ ರಘು ಕೌಟಿಲ್ಯ

raghu kautilya
Published on

ಮೈಸೂರು: ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆಯ (ಮೈಲ್ಯಾಕ್) ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕಾರ್ಖಾನೆಯ ಉನ್ನತೀಕರ ಣಕ್ಕೆ 50 ಕೋಟಿ ರೂ. ಯೋಜನೆ ರೂಪಿಸಲಾಗಿದೆ ಎಂದು ಮೈಲ್ಯಾಕ್ ಅಧ್ಯಕ್ಷ ಆರ್. ರಘು ಕೌಟಿಲ್ಯ ಹೇಳಿದರು.

ಅಮೃತ ಮಹೋತ್ಸವ ಸಂದರ್ಭದಲ್ಲಿ ಕಾರ್ಖಾನೆಗೆ ಹೊಸ ರೂಪ ನೀಡುವ ಅವಶ್ಯಕತೆ ಇದೆ. ಮೈಲ್ಯಾಕ್ ಗ್ರಾಹಕರ ಬೇಡಿಕೆಗೆ ತಕ್ಕಂತೆ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿದ್ದರೂ ಬದಲಾದ ಕಾಲಕ್ಕೆ ತಕ್ಕಂತೆ ಕಾರ್ಖಾನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗಿರು ವುದು ಅನಿವಾರ್ಯ. ಈ ಹಿನ್ನೆಲೆಯಲ್ಲಿ ಅನುದಾನ ಬಿಡುಗಡೆಗೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸರ್ಕಾರದ ಸಂಸ್ಥೆಗಳೊಡನೆ ಇ-ಮಾರ್ಕೆಟ್ ಮಾಡಲು ಜಿಇಎ(ಗವರ್ನಮೆಂಟ್ ಇ-ಮಾರ್ಕೆಟ್‌ಪ್ಲೇಸ್) ಎಂಬ ಪೋರ್ಟಲ್‌ನಲ್ಲಿ ನೊಂದಣಿ ಮಾಡಲಾಗಿದೆ. ಕಂಪನಿಯಲ್ಲಿ ಪ್ರತ್ಯೇಕ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಕ್ರಮ ವಹಿಸಲಾಗುತ್ತಿದೆ. ಕಂಪನಿಯ ಉತ್ಪನ್ನಗಳಿಗೆ ಐಎಸ್‌ಐ ಮುದ್ರೆ ಹಾಗೂ ಭಾರತೀಯ ರೈಲ್ವೆ ಇಲಾಖೆಯ ರೀಸರ್ಚ್ ಡಿಸೈನ್ ಆ್ಯಂಡ್ ಸೈಂಟಿಫಿಕ್ ಆರ್ಗನೈಜೇಷನ್ ಸಂಸ್ಥೆಯ ಪ್ರಮಾಣ ಪತ್ರ ಪಡೆಯುವ ಪ್ರಯತ್ನ ನಡೆಯುತ್ತಿದೆ ಎಂದರು.

ಇಲ್ಲಿ ಉತ್ಪಾದನೆಯಾಗುವ ಅಳಿಸಲಾಗದ ಶಾಯಿಯನ್ನು ವಿದೇಶಕ್ಕೂ ರಫ್ತು ಮಾಡಲಾಗುತ್ತಿದೆ. ಮೂವತ್ತಕ್ಕೂ ಹೆಚ್ಚು ರಾಷ್ಟ್ರಗಳಿಗೆ ಮೈಲ್ಯಾಕ್ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದೆ. 2021-22ರಲ್ಲಿ ಕಾರ್ಖಾನೆಯು 32 ಕೋಟಿ ರೂ.ವಹಿವಾಟು ನಡೆಸಿ 6.80 ಕೋಟಿ ರೂ. ಲಾಭ ಗಳಿಸಿದೆ. 2021-22ರಲ್ಲಿ ಷೇರುದಾರರಿಗೆ ಶೇ.30ರಷ್ಟು ಡಿವಿಡೆಂಡ್ ಘೋಷಿಸಲಾಗಿದ್ದು, ಈ ಪೈಕಿ ಸರ್ಕಾರದ ಪಾಲು 28.40 ಲಕ್ಷ ರೂ.ಗಳನ್ನು ನೀಡಲಾಗಿದೆ ಎಂದು ಹೇಳಿದರು.

ಕಲಾಮಂದಿರದಲ್ಲಿ ನ.28 ರಂದು ಮಧ್ಯಾಹ್ನ 3ಕ್ಕೆ ಹಮ್ಮಿಕೊಂಡಿರುವ ಮೈಲ್ಯಾಕ್ ಅಮೃತ ಮಹೋತ್ಸವ ಸಮಾರಂಭವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಶಾಸಕ ಎಲ್.ನಾಗೇಂದ್ರ, ಸಂಸದರಾದ ಪ್ರತಾಪ್ ಸಿಂಹ, ವಿ.ಶ್ರೀನಿವಾಸ ಪ್ರಸಾದ್, ಸುಮಲತಾ ಅಂಬರೀಶ್, ಮೇಯರ್ ಶಿವಕುಮಾರ್ ಪಾಲ್ಗೊಳ್ಳಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಮೈಲ್ಯಾಕ್ ವ್ಯವಸ್ಥಾಪಕ ನಿರ್ದೇಶಕ ಜಿ.ಕುಮಾರಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net