

ರಾಮನಗರ: ಜಿಲ್ಲೆಯಲ್ಲಿ ಶಾಲೆ ಕಾಲೇಜುಗಳ ಪುನರಾರಂಭಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರ್ಕಾರದ ನಿರ್ಧಾರದಂತೆ ಶುಕ್ರವಾರ ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳು ಆರಂಭಗೊಂಡವು.
ಜಿಲ್ಲೆಯ ಬಹುತೇಕ ಶಾಲೆಗಳು ಮತ್ತು ಕಾಲೇಜುಗಳನ್ನು ಶಿಕ್ಷಕ ಮತ್ತು ಉಪನ್ಯಾಸಕ ವರ್ಗದವರು ತಳಿರು ತೋರಣಗಳಿಂದ ಸಿಂಗಾರ ಮಾಡಿ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು. ದ್ವಿತೀಯ ಪಿಯುಸಿಯಲ್ಲಿ ಶೇ.50-60 ವಿದ್ಯಾರ್ಥಿಗಳು ಪ್ರತಿ ಕಾಲೇಜಿನಲ್ಲಿ ಆಗಮಿಸಿದ್ದರೆ, 10ನೇ ತರಗತಿಯಲ್ಲೂ ಶೇ. 60ರಷ್ಟು ವಿದ್ಯಾರ್ಥಿಗಳು ಹಾಜರಿದ್ದರು.
ಅಲ್ಲದೆ, ಎಲ್ಲ ಶಾಲೆ ಗಳಲ್ಲೂ ಕೊಠಡಿಗಳನ್ನು ಮುನ್ನವೇ ಸ್ಯಾನಿಟೈಸ್ ಮಾಡಿ, ಸ್ವಚ್ಛತೆಗೊಳಿಸಲಾಗಿತ್ತು. ವಿದ್ಯಾರ್ಥಿಗಳು ಬರುತ್ತಿದ್ದಂತೆ ಥರ್ಮಲ್ ಸ್ಕ್ಯಾನರ್ ಮೂಲಕ ತಾಪಮಾನವನ್ನು ಪರಿಶೀಲಿಸಿ, ಪಾಲಕರಿಂದ ಪಡೆದ ಅನುಮತಿ ಪತ್ರ ಪಡೆದು ಶಾಲೆಗೆ ಪ್ರವೇಶ ನೀಡಲಾಯಿತು. ಬಹುತೇಕ ಕಡೆಗಳಲ್ಲಿ ವಿದ್ಯಾರ್ಥಿಗಳಿಗೆ ಗುಲಾಬಿ ಹೂವು, ಸಿಹಿ ನೀಡಿ ಸ್ವಾಗತ ಕೋರಿದರೆ, ಕೆಲವು ಶಾಲೆಗಳಲ್ಲಿ ಕೇಕ್ ಕತ್ತರಿಸಿ ಶಾಲೆ ಪುನರಾಂರಂಭವನ್ನು ಸಂಭ್ರಮಿಸಲಾಯಿತು.
ಪೆನ್ ವಿತರಣೆ: ಬಹುಜನ ವಿದ್ಯಾರ್ಥಿ ಸಂಘದಿಂದ ವಿವಿಧ ಶಾಲೆಗಳ ಮಕ್ಕಳಿಗೆ ಪೆನ್ ಹಾಗೂ ಗುಲಾಬಿ ಹೂವು ನೀಡಲಾಯಿತು. ಈ ವೇಳೆ ಮಾತನಾಡಿದ ಸಂಘದ ಮುಖಂಡ ಹರೀಶ್ ಬಾಲು, ವಿದ್ಯಾರ್ಥಿಗಳು ಕರೊನಾ ನಂತರ ಶಾಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಆತ್ಮೀಯ ಸ್ವಾಗತ ಕೋರಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಾಯಿತು ಎಂದರು. ಮುಖಂಡರಾದ ಶಿವಕುಮಾರ್ ಸ್ವಾಮಿ, ವೆಂಕಟೇಶ್ ಇದ್ದರು.
ಸೋಮವಾರದಿಂದ ಪೂರ್ತಿ: ಹೊಸ ವರ್ಷಾಚರಣೆ ಯಲ್ಲಿ ತೊಡಗಿಕೊಂಡ ಕಾರಣಕ್ಕೆ ಪೂರ್ಣ ಪ್ರಮಾಣ ದಲ್ಲಿ ವಿದ್ಯಾರ್ಥಿಗಳು ಆಗಮಿಸಿರಲಿಲ್ಲ. ಆದರೆ, ಸೋಮವಾರದಿಂದ ಪೂರ್ಣ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಆಗಮಿಸುವ ನಿರೀಕ್ಷೆ ಇದೆ ಎನ್ನು ವುದು ಶಿಕ್ಷಣ ಇಲಾಖೆ ಅಧಿಕಾರಿಗಳ ಅಭಿಪ್ರಾಯ.
20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು
ಜಿಲ್ಲೆಯಲ್ಲಿ ಶುಕ್ರವಾರ ಆರಂಭಗೊಂಡ ಶಾಲೆಗಳಿಗೆ 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು. 10ನೇ ತರಗತಿಯ ಒಟ್ಟು 5740 ವಿದ್ಯಾರ್ಥಿಗಳು ಹಾಜರಾದರೆ , 6-9ನೇ ತರಗತಿಗೆ ನಡೆದ ವಿದ್ಯಾಗಮ ತರಗತಿಗೆ 14626 ವಿದ್ಯಾರ್ಥಿಗಳು ಹಾಜರಾಗಿದ್ದರು. 10ನೇ ತರಗತಿಯಲ್ಲಿ ಒಟ್ಟು 13683 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.