ಶೇ.50: 50ರ ಹಗರಣದ ಮುಡಾದಲ್ಲಿ ಮತ್ತೆ ಲಂಚದ ಘಾಟು

MUDA Mysuru
Published on

ಆರ್.ಕೃಷ್ಣ ಮೈಸೂರು

ಈಗಾಗಲೇ ಶೇಕಡ 50:50ರಷ್ಟು ನಿವೇಶನ ಹಂಚಿಕೆಯಲ್ಲಿ ನಡೆದಿರುವ ಹಗರಣಗಳಿಂದ ಎಲ್ಲೆಡೆ ಸದ್ದು ಮಾಡಿರುವ ಮೈಸೂರು ನಗರಾಭಿವದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ಈಗ ಹೊಸ ದಂಧೆ ಆರಂಭಗೊಂಡಿದೆ.

ಮುಡಾ ಅನುಮೋದನೆಗೊಂಡು ಸ್ಥಳೀಯ ಸಂಸ್ಥೆಗಳಿಗೆ ವರ್ಗಾವಣೆಗೊಳ್ಳಬೇಕಿರುವ ಖಾಸಗಿ ಬಡಾವಣೆಗಳ ಹಸ್ತಾಂತರದಲ್ಲಿ ಈಗ ಲಂಚಾವತಾರ ಮಾತು ಕೇಳಿಬರುತ್ತಿದೆ. ಬಡಾವಣೆಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ ಮಾಡಲು ಪ್ರತಿ ನಿವೇಶನಕ್ಕೆ 20 ಸಾವಿರ ರೂ. ನೀಡಬೇಕು ಎನ್ನುವ ಅಲಿಖಿತ ಲಂಚದ ದರ ನಿಗದಿ ಪಡಿಸಲಾಗಿದ್ದು, ಹಣ ನೀಡದ ಬಡಾವಣೆಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ ಮಾಡುವ ಪ್ರಕ್ರಿಯೆಯನ್ನು ವಿಳಂಬಗೊಳಿಸಲಾಗುತ್ತಿದೆ ಎನ್ನುವ ಆರೋಪ ಡೆವಲಪರ್ಸ್‌ಗಳದ್ದಾಗಿದೆ.

ಬಡಾವಣೆಗಳನ್ನು ನಿರ್ಮಾಣ ಮಾಡಬೇಕಿರುವ ಮುಡಾ ನಿಯಮವನ್ನು ವೀರಿ ಇಷ್ಟು ವರ್ಷಗಳವರೆಗೆ ತನ್ನಲ್ಲಿಯೇ ನಿವೇಶನಗಳ ಖಾತೆ, ಕಟ್ಟಡ ನಿರ್ಮಾಣ, ಖಾತೆ ವರ್ಗಾವಣೆ ಮಾಡಿಕೊಂಡು ಬರುತ್ತಿತ್ತು. ಆದರೆ ಮುಡಾದಲ್ಲಿ ನಡೆದಿದೆ ಎನ್ನಲಾದ ಶೇ.50:50 ನಿವೇಶನ ಹಂಚಿಕೆಯಲ್ಲಿನ ಹಗರಣದಿಂದ ಮುಡಾ ಖಾತೆ ಮಾಡುವುದು ನಿಯಮಬಾಹಿರ ಎಂದು ಆಯುಕ್ತ ರಘುನಂದನ್ ಅವರೇ ಅದಕ್ಕೆ ಕಡಿವಾಣ ಹಾಕಿದ್ದಾರೆ.

ಹೀಗಾಗಿ ಮುಡಾದಲ್ಲಿ ಅನುಮೋದನೆಗೊಂಡು ನಿರ್ಮಾಣಗೊಂಡಿರುವ ಖಾಸಗಿ ಬಡಾವಣೆಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ ಮಾಡುವ ಪ್ರಕ್ರಿಯೆ ಆರಂಭಿಸಲಾಗಿದೆ. ಅದರಂತೆ ಹೂಟಗಳ್ಳಿ ನಗರಸಭೆ, ಶ್ರೆರಾಂಪುರ, ಬೋಗಾದಿ, ಕಡಕೊಳ, ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ, ಅಲ್ಲದೆ ಮೈಸೂರು, ಶ್ರೆರಂಗಪಟ್ಟಣ, ನಂಜನಗೂಡು ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬಡಾವಣೆಗಳನ್ನು ಹಸ್ತಾಂತರ ಮಾಡುವ ಪ್ರಕ್ರಿಯೆಗೆ ಚಾಲ್ತಿ ನೀಡಲಾಗಿದೆ.

ಬಡಾವಣೆಗಳ ಹಸ್ತಾಂತರದಲ್ಲಿ ತಾರತಮ್ಯ:

ಮೊದಲ ಹಂತದಲ್ಲಿ 200 ಬಡಾವಣೆಗಳನ್ನು ಹಸ್ತಾಂತರ ಮಾಡಲಾಗಿದೆ. ಆದರೆ ಇನ್ನೂ 2000 ಬಡಾವಣೆಗಳನ್ನು ಹಸ್ತಾಂತರ ಮಾಡಬೇಕಾಗಿದೆ. ಕೆಲವು ಬಡಾವಣೆಗಳು ಇನ್ನೂ ಪೂರ್ಣಗೊಳ್ಳದೆ ಇರುವುದರಿಂದ ಅಥವಾ ಶೇ.100 ರಷ್ಟು ನಿವೇಶನ ಬಿಡುಗಡೆಗೊಳ್ಳದೆ ಇರುವುದರಿಂದ ಅಂತಹ ಬಡಾವಣೆಗಳನ್ನು ಹಸ್ತಾಂತರದಿಂದ ಕೈ ಬಿಡಲಾಗಿದೆ. ಆದರೆ ಪೂರ್ಣ ಅಭಿವದ್ಧಿಗೊಂಡಿರುವ, ಶೇ.100ರಷ್ಟು ನಿವೇಶನಗಳನ್ನು ಬಿಡುಗಡೆಗೊಳಿಸಿರುವ ಬಡಾವಣೆಗಳ ಹಸ್ತಾಂತರದಲ್ಲಿಯೂ ತಾರತಮ್ಯ ಮಾಡಲಾಗುತ್ತಿದೆ ಎನ್ನಲಾಗಿದೆ.

ಪೂರ್ಣಗೊಂಡಿರುವ ಇಂತಹ ಬಡಾವಣೆಗಳನ್ನು ಹಸ್ತಾಂತರ ಮಾಡಲು ಮುಡಾದಲ್ಲಿ ಈಗ ಲಂಚದ ಬೇಡಿಕೆ ಕೇಳಿಬರುತ್ತಿದೆ. ಹಸ್ತಾಂತರವನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಮುಡಾದ ಕೆಲ ಸಿಬ್ಬಂದಿ, ಬಡಾವಣೆ ಅಭಿವದ್ಧಿ ಪಡಿಸಿದವರಿಗೆ ಪ್ರತಿ ನಿವೇಶನಕ್ಕೆ 20 ಸಾವಿರ ರೂ. ನೀಡಬೇಕು ಎನ್ನುವ ಅಲಿಖಿತ ಶುಲ್ಕ ಕೇಳುತ್ತಿದ್ದಾರೆ. ಜತೆಗೆ ಒಂದು ಬಡಾವಣೆ ಹಸ್ತಾಂತರಕ್ಕೆ 5ರಿಂದ 20 ಲಕ್ಷ ರೂ.ವರೆವಿಗೂ ಡಿಮಾಂಡ್ ಮಾಡಲಾಗುತ್ತಿದೆ ಎನ್ನುವ ದೂರು ಕೇಳಿಬರುತ್ತಿದೆ. ಹೀಗಾಗಿ ಮೊದಲೇ ಮುಡಾದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿರುವ ಜನರಿಗೆ ಸಿಬ್ಬಂದಿಯ ಇಂತಹ ಬೇಡಿಕೆಂದ ಮತ್ತಷ್ಟು ಸಿಟ್ಟು ಆಕ್ರೋಶ ವ್ಯಕ್ತವಾಗುತ್ತಿದೆ.

ಬದಲಿ ನಿವೇಶನ ಪಡೆದವರಿಗೆ ಆತಂಕ:

ಮುಡಾದಿಂದ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರ್ಯಾಯವಾಗಿ ಬದಲಿ ನಿವೇಶನ ಪಡೆದ ರತರು ಮತ್ತು ಭೂ ಮಾಲೀಕರು ಇತ್ತೀಚೆಗೆ ನಡೆದ ಮುಡಾ ಸಾಮಾನ್ಯ ಸಭೆಯ ನಿರ್ಧಾರದಿಂದ ಆತಂಕಗೊಂಡಿದ್ದಾರೆ. ಕೆಲ ತಿಂಗಳ ಬಳಿಕ ನಡೆದ ಮುಡಾ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರೆಲ್ಲರೂ ಅಕ್ರಮವಾಗಿ ಶೇ. 50:50 ಅನುಪಾತದಡಿ ಬದಲಿ ನಿವೇಶನ ಹಂಚಿಕೆ ಮಾಡಲಾಗಿದ್ದು, ಹಂಚಿಕೆಯಾಗಿರುವ ಎಲ್ಲ ನಿವೇಶನಗಳನ್ನು ವಾಪಸ್ ಪಡೆಯಬೇಕು ಎಂದು ಒಕ್ಕೊರಲಿನ ನಿರ್ಣಯ ಕೈಗೊಂಡಿರುವುದೇ ಇವರ ಭೀತಿಗೆ ಕಾರಣ. ತಾವು ಪಡೆದಿರುವ ನಿವೇಶನಗಳು ಎಲ್ಲಿ ಮುಡಾ ವಶಪಡಿಸಿಕೊಳ್ಳುವುದೋ, ಹೂಡಿರುವ ಬಂಡವಾಳ ಎಲ್ಲಿ ಕೈ ತಪ್ಪುವುದೋ ಎಂಬ ಭೀತಿ ಗ್ರಾಹಕರು ಮತ್ತು ಬಿಲ್ಡರ್‌ಗಳದ್ದಾಗಿದೆ.

ಈ ಮಧ್ಯೆ ಶಾಸಕ ಟಿ.ಎಸ್.ಶ್ರೆವತ್ಸ ಅವರು ಶೇ. 50:50 ಅನುಪಾತದ ನಿವೇಶನಗಳ ನಕ್ಷೆ ಮಂಜೂರಾತಿ ರದ್ದುಪಡಿಸಬೇಕು ಎಂದು ಮುಡಾ ಅಧ್ಯಕ್ಷರಿಗೆ ಪತ್ರ ಬರೆದಿರುವುದು ಬದಲಿ ನಿವೇಶನ ಪಡೆದವರನ್ನು ಹೆಚ್ಚು ಚಿಂತೆಗೀಡಾಗುವಂತೆ ಮಾಡಿದೆ.

ಮುಡಾ ಬಡಾವಣೆ ನಿರ್ಮಾಣ ಮಾಡಲು ಭೂ ಸ್ವಾಧೀನ ಪಡಿಸಿಕೊಂಡ ಭೂವಿಗೆ ಪರ್ಯಾಯವಾಗಿ ಭೂ ಮಾಲೀಕರಿಗೆ ಶೇ. 50:50 ಅನುಪಾತದಲ್ಲಿ ಬದಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಪ್ರಾಧಿಕಾರದ ಸಭೆಯಲ್ಲಿ ಮಂಡಿಸಿ ಒಪ್ಪಿಗೆ ನೀಡಿರುವ ಪ್ರಕರಣಗಳೊಂದಿಗೆ ನ್ಯಾಯಾಲದ ಆದೇಶದಂತೆಯೂ ಹಂಚಿಕೆ ಮಾಡಲಾಗಿದೆ.

ಎಚ್.ಎಂ.ಕಾಂತರಾಜು ಅವರು ಮುಡಾ ಆಯುಕ್ತರಾಗಿ ಮುಡಾ ಆಸ್ತಿಗಳನ್ನು ಗುರುತಿಸಿ ಖಾಲಿ ನಿವೇಶನಗಳ ಪಟ್ಟಿ ಸಿದ್ಧ ಮಾಡಿದ್ದರು. ನಂತರ ಬಂದ ಡಾ.ಡಿ.ಬಿ.ನಟೇಶ್ ಮತ್ತು ಜಿ.ಟಿ.ದಿನೇಶ್‌ಕುಮಾರ್ ಅವರು ಮುಡಾ ಆಯುಕ್ತರಾಗಿದ್ದ ಸಂದರ್ಭದಲ್ಲಿ ಅಂದಾಜು 1950 ನಿವೇಶನಗಳನ್ನು ಬದಲಿ ನಿವೇಶನಗಳನ್ನಾಗಿ ಹಂಚಿಕೆ ಮಾಡಿದ್ದಾರೆ ಎನ್ನಲಾಗಿದೆ.

ಮುಡಾದಲ್ಲಿ ಈಗ ಶೇ.50:50 ಅನುಪಾತದಲ್ಲಿ ನಿವೇಶನ ಹಂಚಿಕೆ ಹಗರಣದಿಂದ ಸಂಪೂರ್ಣ ಬಯಲಾಗಿದೆ. ಈಗ ಬಡಾವಣೆಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ ಮಾಡುವ ಪ್ರಕ್ರಿಯೆಯಲ್ಲಿಯೂ ಸಿಬ್ಬಂದಿ ಒತ್ತಾಯವಾಗಿ ಲಂಚದ ಬೇಡಿಕೆ ಇಡುತ್ತಿರುವುದು ಸರಿಯಲ್ಲ. ಆಯುಕ್ತರು, ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಈ ಬಗ್ಗೆ ಗಮನ ಹರಿಸಬೇಕು. ನಿಯಮಾನುಸಾರ ಬಡಾವಣೆಗಳನ್ನು ಹಸ್ತಾಂತರ ಮಾಡುವ ಜತೆಗೆ ಸ್ಥಳೀಯ ಸಂಸ್ಥೆಗಳಿಗೆ ಅಭಿವೃದ್ಧಿ ಶುಲ್ಕ ನೀಡಬೇಕು.

ಡಾ.ಈ.ಸಿ.ನಿಂಗರಾಜಗೌಡ, ಡೆವಲಪರ್

ನಿಯಮದಂತೆ ಬಡಾವಣೆಗಳ ಹಸ್ತಾಂತರ ಪ್ರಕ್ರಿಯೆ ಹಂತ ಹಂತವಾಗಿ ನಡೆಯುತ್ತಿದೆ. ಪೂರ್ಣ ಅಭಿವೃದ್ಧಿಗೊಳ್ಳದ, ಶೇ.100 ರಷ್ಟು ನಿವೇಶನ ಬಿಡುಗಡೆಗೊಳ್ಳದ ಬಡಾವಣೆಗಳನ್ನು ಹೊರತುಪಡಿಸಿ ನಿಯಮ ಬದ್ಧವಾಗಿರುವ ಎಲ್ಲ ಬಡಾವಣೆಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಗೊಳಿಸುವ ಪ್ರಕ್ರಿಯೆ ಹಂತ ಹಂತವಾಗಿ ನಡೆಯಲಿದೆ. ಲಂಚದ ಬೇಡಿಕೆ ಕುರಿತು ದೂರು ನೀಡಿದರೆ ಕ್ರಮ ವಹಿಸಲಾಗುವುದು.

ರಘುನಂದನ್, ಆಯುಕ್ತರು, ಮುಡಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net