

ಹುಬ್ಬಳಿ: ಮನೆಯಲ್ಲಿ ಕುಳಿತು ಹೆಚ್ಚಿನ ಲಾಭ ಗಳಿಸುವ ಆಸೆ ತೋರಿಸಿದ ಖದೀಮರು, ಇಲ್ಲಿಯ ಅರವಿಂದ ನಗರದ ರಾಜು ಎಂಬುವರ ಬ್ಯಾಂಕ್ ಖಾತೆಯಿಂದ 50.19 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಟೆಲಿಗ್ರಾಂ ಅಪ್ಲಿಕೇಶನ್‌ದಲ್ಲಿ ಸಂದೇಶ ಕಳುಹಿಸಿ, ಪ್ರತಿದಿನ ಮನೆಯಲ್ಲೇ ಕುಳಿತು 10ರಿಂದ 30 ಸಾವಿರ ರೂ. ಗಳಿಸಬಹುದು ಎಂದು ವಂಚಕರು ನಂಬಿಸಿದ್ದಾರೆ. ನಾವು ಕೊಡುವ ಟಾಸ್ಕ್‌ಗಳನ್ನು ಪೂರ್ಣಗೊಳಿಸಬೇಕು ಮತ್ತು ಟಾಸ್ಕ್ ಪಡೆಯಲು ಹಣ ಹೂಡಿಕೆ ಮಾಡುತ್ತಲಿರಬೇಕು ಎಂದಿದ್ದಾರೆ. ಮೊದ ಮೊದಲು ಹೆಚ್ಚಿನ ಲಾಭಾಂಶ ಕೊಟ್ಟಂತೆ ಮಾಡಿದ್ದಾರೆ. ನಂತರ ವಿವಿಧ ಐಡಿಗಳ ಮೂಲಕ ಟಾಸ್ಕ್ ಕೊಟ್ಟು ಪೂರ್ಣಗೊಳಿಸುವಂತೆ ತಮ್ಮ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ರಾಜು ದೂರಿನಲ್ಲಿ ವಿವರಿಸಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.