

ಎಂ.ಕೆ.ಹುಬ್ಬಳ್ಳಿ: ಚನ್ನಮ್ಮನ ಕಿತ್ತೂರು ವಿಧಾನಸಭೆ ಮತಕ್ಷೇತ್ರದ ಎಂ.ಕೆ.ಹುಬ್ಬಳ್ಳಿ ಹೊರವಲಯದ ಖಾನಾಪುರ ಬೈಪಾಸ್ ಮತ್ತು ಎಂ.ಕೆ. ಹುಬ್ಬಳ್ಳಿಯಿಂದ ಚಿಕ್ಕಬಾಗೇವಾಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಗಳ ಸ್ಥಿತಿ ಹೇಳತೀರದ್ದಾಗಿದೆ.
ರಸ್ತೆಗಳು ಹಾಳಾಗಿ ಅರ್ಧ ದಶಕ ಉರುಳಿದ್ದರೂ ಈವರೆಗೂ ಅಭಿವೃದ್ಧಿ ಭಾಗ್ಯ ಕೂಡಿಬಂದಿಲ್ಲ. ಜನಪ್ರತಿನಿಧಿಗಳು ನೀಡಿದ ಭರವಸೆ ಈಡೇರುತ್ತಿಲ್ಲ. ಹೀಗಾಗಿ ಇಲ್ಲಿನ ಜನರಿಗೆ ಕೆಸರುಮಯ ರಸ್ತೆಯಲ್ಲಿ ಸಂಚಾರ ಅನಿವಾರ್ಯ ಎಂಬಂತಾಗಿದೆ. ಖಾನಾಪುರ, ಗೋವಾ ಸೇರಿ ಹಲವು ಪ್ರಮುಖ ನಗರ ಹಾಗೂ ಪಟ್ಟಣ ಪ್ರದೇಶಗಳಿಗೆ ಸಂಪರ್ಕ ಕೊಂಡಿಯಾಗಿರುವ ಎಂ.ಕೆ.ಹುಬ್ಬಳ್ಳಿ ಹೊರವಲಯದ ಬೈಪಾಸ್ ರಸ್ತೆ ಹಾಳಾಗಿ ಐದಾರೂ ವರ್ಷ ಕಳೆದಿವೆ. ತಗ್ಗು ಗುಂಡಿಗಳ ಮಧ್ಯೆ ಕಣ್ಮರೆಯಾಗಿರುವ ರಸ್ತೆ ಮಳೆಗಾಲಕ್ಕೊಮ್ಮೆ ಕೆಸರುಗದ್ದೆಯಂತಾಗುತ್ತಿದೆ. ಸ್ವಲ್ಪ ಆಯತಪ್ಪಿದರೂ ಕೆಸರು ಮಜ್ಜನ ಗ್ಯಾರಂಟಿ ಎಂಬಂತಾಗಿದೆ.
ಶಾಲೆಗೆ ತೆರಳುವ ಸಾವಿರಾರು ವಿದ್ಯಾರ್ಥಿಗಳಿಗೆ ಇದೇ ರಸ್ತೆಯೇ ಸಂಪರ್ಕ ಕೊಂಡಿ. ಆದರೆ, ತಗ್ಗು-ಗುಂಡಿಗಳ ಮಧ್ಯೆ ಕೆಸರುಮಯವಾಗಿರುವ ರಸ್ತೆಯಲ್ಲಿ ಶುಭ್ರ ಬಟ್ಟೆಗಳನ್ನು ಹಾಕಿಕೊಂಡು ಸಾಗುವುದು ಸವಾಲಾಗಿ ಪರಿಣಮಿಸಿದೆ. ಚಪ್ಪಲಿ, ಬೂಟುಗಳಿಗೆ ಕೆಸರು ಮೆತ್ತಿ ಶಾಲೆಯಲ್ಲಿ ಕಾಲಿಡದಂತಹ ಪರಿಸ್ಥಿತಿ ವಿದ್ಯಾರ್ಥಿಗಳಿಗೆ ಬಂದೊದಗಿದೆ.
ಬೈಕ್, ಸೈಕಲ್ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಎತ್ತಿನ ಗಾಡಿ, ಟ್ರಾೃಕ್ಟರ್‌ಗಳ ಸಾಗಾಟ ರೈತರಿಗೆ ಕಷ್ಟವಾಗಿದೆ. ಸಗಟು ಹೊತ್ತು ಸಾಗುವ ಲಾರಿ, ಬಸ್ ಸಂಚಾರವು ಇಲ್ಲಿ ದುಸ್ತರವಾಗಿದೆ. ಸಮಸ್ಯೆಗೆ ಸ್ಪಂದಿಸದವರ ವಿರುದ್ಧ ಜನರು ಕಿಡಿಕಾರುತ್ತಿದ್ದಾರೆ. ತಕ್ಷಣವೇ ರಸ್ತೆ ಅಭಿವೃದ್ಧಿಪಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಎಂ.ಕೆ.ಹುಬ್ಬಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ-4ರಿಂದ ಚಿಕ್ಕಬಾಗೇವಾಡಿ ಗ್ರಾಮದ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯ ಸ್ಥಿತಿ ಕೆಟ್ಟಿದೆ. ರಸ್ತೆ ಸಮಸ್ಯೆ ಪರಿಹಾರಕ್ಕಾಗಿ ಆಗ್ರಹಿಸಿ ಇಲ್ಲಿನ ಜನರು ಹೋರಾಟಕ್ಕಿಳಿದಾಗೊಮ್ಮೆ ಶೀಘ್ರ ರಸ್ತೆ ಅಭಿವೃದ್ಧಿಪಡಿಸುವ ಭರವಸೆ ನೀಡುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇತ್ತ ಸುಳಿಯುವುದೇ ಇಲ್ಲ. ಹೀಗಾಗಿ ಹಾಳಾದ ರಸ್ತೆಗೆ ಅರ್ಧ ದಶಕ ಕಳೆದರೂ ಅಭಿವೃದ್ಧಿ ಭಾಗ್ಯ ಬಂದಿಲ್ಲ. ಜಲ್ಲಿಕಲ್ಲು(ಕಡಿ) ಹೊತ್ತು ಸಾಗಿಬರುವ ಟಿಪ್ಪರ್‌ಗಳು ಸಹ ಈ ರಸ್ತೆಗೆ ಮಾರಕವಾಗಿ ಕಾಡುತ್ತಿದ್ದು, ಜನರ ಜೀವಕ್ಕೂ ರಕ್ಷಣೆ ಇಲ್ಲದಾಗಿದೆ.
ಹಾಳಾಗಿರುವ ಇವೆರಡೂ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಸಂಚಕಾರ ತಂದೊಡ್ಡಿದ್ದು, ಕಬ್ಬು ಸಾಗಿಸಲು ರೈತರು ಪಡುತ್ತಿರುವ ಕಷ್ಟ ಹೇಳತೀರದ್ದಾಗಿದೆ. ತಗ್ಗು-ಗುಂಡಿಗಳಿಂದಾಗಿ ಕಬ್ಬು ಹೊತ್ತು ಬರುವ ವಾಹನಗಳು ಪಲ್ಟಿ ಹೊಡೆಯುತ್ತಿದ್ದು, ರೈತರು ಪಡುತ್ತಿರುವ ಕಷ್ಟ ಅಷ್ಟಿಷ್ಟಲ್ಲ. ರಸ್ತೆ ಪಕ್ಕದ ಮನೆಗಳಿಗೂ ವಾಹನಗಳು ಪಲ್ಟಿ ಹೊಡೆಯುವುದು ಆತಂಕ ತಂದಿದೆ. ರಸ್ತೆ ಅಭಿವೃದ್ಧಿಗೆ ತಕ್ಷಣ ಕ್ರಮಕೈಗೊಳ್ಳದಿದ್ದರೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ರೈತರು ಎಚ್ಚರಿಸಿದ್ದಾರೆ.
| ಶಿವಾನಂದ ವಿಭೂತಿಮಠ ಎಂ.ಕೆ.ಹುಬ್ಬಳ್ಳಿ