

ಕುಶಾಲನಗರ: ಕುಶಾಲನಗರ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತ ನಿರ್ಮಾಣ ಮತ್ತು 200 ಮೀಟರ್ ಫುಟ್‌ಪಾತ್‌ಗೆ ಇಂಟರ್‌ಲಾಕ್ ಅಳವಡಿಸಲು 15 ನೇ ಹಣಕಾಸು ಯೋಜನೆಯಲ್ಲಿ ಅನುದಾನ ಮೀಸಲಿಟ್ಟು, ಕಾಮಗಾರಿ ನಡೆಸಲಾಗುತ್ತಿದೆ ಎಂದು ಪುರಸಭೆ ಅಧ್ಯಕ್ಷ ಬಿ.ಜಯವರ್ಧನ ತಿಳಿಸಿದ್ದಾರೆ.
ಶನಿವಾರದ ನಂ1 ಕನ್ನಡ ದಿನ ಪತ್ರಿಕೆ ‘ವಿಜಯವಾಣಿ’ಯಲ್ಲಿ ‘ಪುರಸಭೆಯಿಂದ ಕಾರ್ಯಪ್ಪ ವೃತ್ತ ವಿರೂಪ’ ಶೀರ್ಷಿಕೆಯಡಿ ಶನಿವಾರ ಪ್ರಕಟವಾದ ಸುದ್ದಿಗೆ ಪ್ರತಿಕ್ರಿಯೆ ನೀಡಿರುವ ಅವರು, ಮುಂದಿನ 15ರಿಂದ 20 ದಿನದಲ್ಲಿ ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. 5 ಲಕ್ಷ ರೂ. ವೆಚ್ಚದಲ್ಲಿ ಕಾರ್ಯಪ್ಪ ಅವರ ಪ್ರತಿಮೆಯೊಂದಿಗೆ ವೃತ್ತಕ್ಕೆ ಗ್ರಾನೈಟ್ ಅಳವಡಿಸಿ ಪಟ್ಟಣದ ವಿಶೇಷ ಆಕರ್ಷಣೆಯಾಗುವ ಮಾದರಿಯಲ್ಲಿ ವೃತ್ತ ನಿರ್ಮಾಣ ಮಾಡಲಿದ್ದೇವೆ. 200 ಮೀಟರ್ ಫುಟ್‌ಪಾತ್ ಇಂಟರ್‌ಲಾಕ್ ಅಳವಡಿಕೆ ಕಾರ್ಯವು ಪ್ರಗತಿಯಲ್ಲಿದೆ. ಪೋಸ್ಟ್ ಆಫೀಸ್ ಸಮೀಪದಲ್ಲಿ ಸ್ವಲ್ಪ ಪ್ರಮಾಣದ ಕಾಮಗಾರಿ ಬಾಕಿ ಇದ್ದು, ಶೀಘ್ರ ಪೂರ್ಣಗೊಳ್ಳಲಿದೆ. ಎಲ್ಲ್ಲ ಕಾಮಗಾರಿಗಳನ್ನು ಸದ್ಯದಲ್ಲೇ ಪೂರ್ಣಗೊಳಿಸಿ ಉದ್ಘಾಟಿಸಲಾಗುತ್ತದೆ ಎಂದು ಶನಿವಾರ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.