

ಹಾಸನ: ಮನೆಯ ಡೋರ್ ಲಾಕ್ ತೆಗೆದು ರೂಮಿನ ಬೀರುವಿನಲ್ಲಿದ್ದ ಸುಮಾರು 4.92 ಲಕ್ಷ ರೂ. ಬೆಲೆಯ ಚಿನ್ನಾಭರಣ ಕಳವು ಮಾಡಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿ ಹೋಬಳಿ, ಮುದ್ದನಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ಸುನೀಲ್ ಕುಮಾರ್.ಎಂ ಆರ್ ಎಂಬುವರು ಗೊರೂರು ಪವರ್ ಸ್ಟೇಷನ್‌ನಲ್ಲಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದು, ನಿತ್ಯ ಮನೆಯಿಂದಲೇ ಹೋಗಿ ಬರುತ್ತಿದ್ದರು. ನ.19 ರಂದು ಬೆಳಿಗ್ಗೆ ಎಂದಿನಂತೆ ಬೈಕಿನಲ್ಲಿ ಗೊರೂರಿಗೆ ಹೋಗಿದ್ದು, ಮನೆಯಲ್ಲಿ ತಂದೆ ರಂಗೇಗೌಡ ಮತ್ತು ತಾಯಿ ರತ್ನಮ್ಮ ಇದ್ದರು.
ಈ ದಂಪತಿ 9.30 ಗಂಟೆ ಸುಮಾರಿಗೆ ಮನೆಗೆ ಡೋರ್‌ಲಾಕ್ ಮಾಡಿಕೊಂಡು ಕೀಯನ್ನು ಮನೆ ಮುಂದಿನ ಹೂವಿನ ಕುಂಡದಲ್ಲಿಟ್ಟು ಎಳನೀರು ಕೊಯ್ಯಲು ಹೋಗಿದ್ದರು. ಮಧ್ಯಾಹ್ನ ಕೆಲಸ ಮುಗಿಸಿ ಬಂದಾಗ ಕಳ್ಳತನ ನಡೆದಿತ್ತು.
ಕೀ ತೆಗೆದು 37 ಗ್ರಾಂ ತೂಕದ 3 ಚಿನ್ನದ ಉಂಗುರ, 26 ಗ್ರಾಂ ತೂಕದ 2 ಚಿನ್ನದ ಬಳೆ, 16 ಗ್ರಾಂ ತೂಕದ 3 ಜೊತೆ ಕಿವಿ ಓಲೆ, 12 ಗ್ರಾಂ ತೂಕದ 3 ಚಿನ್ನದ ಉಂಗುರ, 26 ಗ್ರಾಂ ತೂಕದ ಚಿನ್ನದ ಸರ, 48 ಗ್ರಾಂ ತೂಕದ ಚಿನ್ನದ ಲಾಂಗ್ ಸರ ದೋಚಿ ಕಳ್ಳರು ಪರಾರಿಯಾಗಿದ್ದಾರೆ.
ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಜೋಳದ ಬ್ಯಾಗ್ ಕಳವು:
ಚನ್ನರಾಯಪಟ್ಟಣ ತಾಲೂಕು ಶ್ರವಣಬೆಳಗೊಳದ ರೈತ ಸಂಪರ್ಕ ಕೇಂದ್ರದ ಬೀಗ ಮುರಿದು 53,440 ರೂ.ಬೆಲೆಯ 40 ಜೋಳದ ಬ್ಯಾಗ್ ಮತ್ತು 15 ಸಾವಿರ ಬೆಲೆಯ 3 ಫ್ಯಾನ್‌ಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ. ನ.17-18 ರ ನಡುವೆ ಈ ಕೃತ್ಯ ನಡೆದಿದ್ದು, ಕೇಂದ್ರ ಎ.ಒ. ದಿನೇಶ್ ಅವರು ಮೇಲಧಿಕಾರಿಗಳ ನಿರ್ದೇಶನದ ಮೇರೆಗೆ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ.
ಶ್ರೀಗಂಧ ಕಳವಿಗೆ ಯತ್ನ-ಬಂಧನ:
ಆಲೂರು ತಾಲೂಕು ಚನ್ನಾಪುರ ಗ್ರಾಮದ ಪುಟ್ಟರಾಜು ಎಂಬುವರು ಹೊಸೂರು ಗ್ರಾಮದ ಜಮೀನಿನಲ್ಲಿ ಬೆಳೆದಿದ್ದ ಶ್ರೀಗಂಧದ ಮರ ಕಳವಿಗೆ ಯತ್ನಿಸಿದ್ದ ಆಸಾಮಿ ಸಿಕ್ಕಿ ಬಿದ್ದಿದ್ದಾನೆ. ಮರಸುಕೊಪ್ಪಲು ಗ್ರಾಮದ ಪುನೀತ್ ಬಂಧಿತ ಆರೋಪಿ. ನ.19 ರಂದು ಮಧ್ಯಾಹ್ನ ಪುನೀತ್ ಸೇರಿ ಮರ ಕಡಿಯುತ್ತಿದ್ದರು. ಇದನ್ನು ಗಮನಿಸಿದ ಪುಟ್ಟರಾಜು ಅವರ ಪತ್ನಿ ಮಂಜುಳಾ ಅವರು, ಪತಿಗೆ ತಿಳಿಸಿದರು.
ಪುಟ್ಟರಾಜು 112 ಗೆ ಕರೆ ಮಾಡಿದ್ದಾರೆ. ಪೊಲೀಸರು ಬಂದು ಗಂಧದ ಮರ ಕಡಿಯುತ್ತಿದ್ದವರ ಬಳಿ ಹೋದಾಗ ಒಬ್ಬ ಓಡಿ ಹೋಗಿದ್ದು, ಪುನೀತ್ ಸಿಕ್ಕಿ ಬಿದ್ದಿದ್ದಾನೆ. ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.