

ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ/ಮಾಂಜರಿ: ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾಳಾದ ಪ್ರತಿ ಮನೆಗೆ 5 ಲಕ್ಷ ರೂ.ಪರಿಹಾರ ನೀಡಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಚಿಕ್ಕೋಡಿ ತಾಲೂಕಿನ ಮಾಂಜರಿ, ಇಂಗಳಿ ಸೇರಿ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಅವಲೋಕಿಸಿ ಮಾತನಾಡಿದ ಅವರು, 2019ರಲ್ಲಿ ಬಿ. ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಪ್ರವಾಹದಲ್ಲಿ ಹಾಳಾದ ಮನೆಗಳಿಗೆ 5 ಲಕ್ಷ ರೂ.ಪರಿಹಾರ ಹಾಗೂ ನೀರು ನುಗ್ಗಿದ ಮನೆಗೆ 10 ಸಾವಿರ ರೂ. ಪರಿಹಾರ ನೀಡಿದ್ದರು. ಅದೇ ರೀತಿ ಪ್ರಸಕ್ತ ವರ್ಷ ಪ್ರವಾಹದಲ್ಲಿ ಹಾಳಾದ ಮನೆಗಳಿಗೆ ರಾಜ್ಯ ಸರ್ಕಾರ ಕೂಡಲೇ 5 ಲಕ್ಷ ರೂ.ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು.
ಬಿಜೆಪಿ ಸರ್ಕಾರದಲ್ಲಿ ಮಂಜೂರಾಗಿರುವಂತಹ ಇಂಗಳಿ-ದಿಗ್ಗೇವಾಡಿ ಸೇತುವೆ ಕಾಮಗಾರಿಯೂ ಅರ್ಧಕ್ಕೆ ನಿಂತು ಹೋಗಿದ್ದು, ಸರ್ಕಾರ ಕೂಡಲೇ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಪೂರ್ತಿಗೊಳಿಸಬೇಕು. ಇದರಿಂದ ಇಂಗಳಿ, ಮಾಂಜರಿ, ಯಡೂರ ಅಂಕಲಿ ಸೇರಿ ವಿವಿಧ ಗ್ರಾಮಗಳಿಗೆ ನೀರಿನ ಅನುಕೂಲವಾಗುತ್ತದೆ ಎಂದರು.
ಚಿಕ್ಕೋಡಿ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ, ಅಜಿತರಾವ ದೇಸಾಯಿ, ದತ್ತ ಸಕ್ಕರೆ ಕಾರ್ಖಾನೆ ನಿರ್ದೇಶಕ ಅಮರ ಯಾದವ, ಶೀತಲ ಯಾದವ, ಶಶಿಕಾಂತ ಪಾಟೋಳೆ, ಅಣ್ಣಾಸಾಹೇಬ ಪವಾರ, ಶಂಕರ ಪವಾರ, ಮೋಹನ ಲೋಕರೆ, ಜ್ಯೋತಿರಾಮ ಯಾದವ, ಪರಶುರಾಮ ತೋರಸೆ, ಅಶೋಕ ಕಾಳಿಬೀರೆ, ದೀಪಕ ಗಾಯಕವಾಡ, ಅಣ್ಣಾಸಾಹೇಬ ಚೌಗಲಾ, ಅಜಿತ ಚಿಗರೆ, ಸುನೀಲ ಪಾಟೋಳೆ, ಬಾಬಾಸಾಹೇಬ ದಾಬಡೆ ಇತರರಿದ್ದರು.