5 ರೂ. ಹೊಸ ನಾಣ್ಯವಿದ್ದರಷ್ಟೇ ಶುದ್ಧ ನೀರು!

13Kittur-Web
ಶುದ್ಧ ಕುಡಿಯುವ ನೀರಿಗಾಗಿ ಈ ನಮೂನೆಯ ನಾಣ್ಯಗಳನ್ನೇ ಬಳಸಬೇಕಿದೆ.
Published on

ಚನ್ನಮ್ಮನ ಕಿತ್ತೂರು: 5 ರೂಪಾಯಿಗೆ 20 ಲೀಟರ್ ಶುದ್ಧ ಕುಡಿಯುವ ನೀರು ಕಲ್ಪಿಸುತ್ತಿರುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಿಂದ ಸಾರ್ವಜನಿಕರಿಗೆ ಅನುಕೂಲವಾಗಿದೆಯಾದರೂ ಹೊಸ ’ನಾಣ್ಯ’ವೇ ಬೇಕೆಂಬ ನಿಯಮ ಇಕ್ಕಟ್ಟಿಗೆ ಸಿಲುಕಿಸಿದೆ.

ನೀರಿಗಾಗಿ ಬರುವ ಜನರು 5 ರೂ. ನಾಣ್ಯ ತಂದಿರುತ್ತಾರೆ. ಆದರೆ ಅದು ಹಳೆಯದಾಗಿರುತ್ತದೆ. ಘಟಕದ ಬಾಕ್ಸ್ ಗೆ ಮಾತ್ರ ಹೊಸ ನಾಣ್ಯವನ್ನೇ ಹಾಕಬೇಕು. ಇದರಿಂದಾಗಿ ನಿತ್ಯ ಸಾಕಷ್ಟು ಜನರು ಕಾಯಿನ್‌ಗಾಗಿ ಪರದಾಡುತ್ತಿದ್ದಾರೆ. ಹತ್ತಿರದ ಅಂಗಡಿಗಳಿಗೆ ಎಡತಾಕಿ ಬೇರೆ ನಾಣ್ಯ ಪಡೆದು ನೀರು ಪಡೆಯುವಂತಾಗಿದೆ. ಸಮಸ್ಯೆಯಿಂದ ಪಾರಾಗಬೇಕೆಂದರೆ ಹಳೆಯ ನಾಣ್ಯಗಳನ್ನು ಪಡೆಯುವಂತಾಗಬೇಕು ಎಂಬ ಸಲಹೆ ನಾಗರಿಕರಿಂದ ಕೇಳಿಬಂದಿದೆ. ಚನ್ನಮ್ಮನ ಕಿತ್ತೂರು ಪಟ್ಟಣದಲ್ಲಿ ಪಟ್ಟಣ ಪಂಚಾಯಿತಿಯಿಂದ 4 ಹಾಗೂ ಖಾಸಗಿ ಸಂಸ್ಥೆಗಳಿಂದ ಹತ್ತಾರು ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಎಲ್ಲ ಕಡೆಯೂ ಇದೇ ಸಮಸ್ಯೆ ಕಾಡುತ್ತಿದೆ. ಘಟಕಗಳಲ್ಲಿ ಎರಡು ಇಂಚು ಅಗಲ ಹಾಗೂ 1 ಸೆಂ.ಮೀ. ಗಾತ್ರದ ಹಿತ್ತಾಳೆ ಬಣ್ಣದ ನಾಣ್ಯವನ್ನು ಮಾತ್ರ ಹಾಕಬೇಕಿರುವುದರಿಂದ ಜನರಿಗೆ ಸಮಸ್ಯೆಯಾಗಿದೆ.

ಸಾರ್ವಜನಿಕರ ಬೇಸರ: ಗ್ರಾಮೀಣ ಪ್ರದೇಶದ ಜನರು ನಿತ್ಯ ಹೊಸ ನಾಣ್ಯಗಳನ್ನು ಎಲ್ಲಿಂದ ತರುವುದು ಎಂಬ ಪ್ರಶ್ನೆ ಉದ್ಭವಿಸಿದೆ. ನಾಣ್ಯ ಜಂಜಾಟದಿಂದ ಬೇಸತ್ತ ಅನೇಕರು ಶುದ್ಧ ಕುಡಿಯುವ ನೀರಿನ ಘಟಕದ ಕಡೆಗೆ ಬರುತ್ತಿಲ್ಲ. ಒಂದು ಘಟಕ ನಿರ್ಮಾಣಕ್ಕೆ ಸರ್ಕಾರ 50 ರಿಂದ 70 ಲಕ್ಷ ರೂ. ಖರ್ಚು ಮಾಡಿದೆ. ಆದರೆ ಅದು ಸಾರ್ವಜನಿಕರಿಗೆ ನೆರವಾಗದಿದ್ದರೆ ಏನು ಪ್ರಯೋಜನ ಎಂಬ ಪ್ರಶ್ನೆ ಮೂಡಿದೆ.

ಆರೋಗ್ಯಕ್ಕೆ ಹಾನಿಕರ: ಕೊಳವೆ ಬಾವಿಯಲ್ಲಿ ನೀರು ಸಿಗುತ್ತಿದೆಯಾದರೂ ಅದು ಲವಣಯುಕ್ತ ಗಡಸು ನೀರಾಗಿದೆ. ಇದನ್ನು ಸೇವಿಸುವುದರಿಂದ ಮೂತ್ರಕೋಶದಲ್ಲಿ ಹರಳು ಸೇರಿ ಮತ್ತಿತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಶುದ್ಧ ಕುಡಿಯುವ ನೀರಿನ ಘಟಕಗಳ ಅವಶ್ಯಕತೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮುತುವರ್ಜಿ ವಹಿಸಿ ಘಟಕಗಳನ್ನು ಸ್ಥಾಪಿಸಿದೆಯಾದರೂ ಇದೀಗ ನಾಣ್ಯ ಸಮಸ್ಯೆ ತಲೆದೋರಿದೆ.

ಘಟಕ ನಿರ್ವಹಣೆಗಾಗಿ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು ಅವರು ಇದ್ದಾಗ ಬದಲಿ ನಾಣ್ಯ ಕೊಡುತ್ತಾರೆ. ಆದರೆ ಟ್ಯಾಂಕ್ ನೀರು ಭರ್ತಿಯಾದ ತಕ್ಷಣ ಸಿಬ್ಬಂದಿ ಅಲ್ಲಿಂದ ತೆರಳುವ ಪರಿಪಾಠ ಬೆಳೆಸಿಕೊಂಡಿರುವುದರಿಂದ ಸಾರ್ವಜನಿಕರು ’ನಾಣ್ಯ’ ಸಮಸ್ಯೆ ಎದುರಿಸುವಂತಾಗಿದೆ. ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳಿರುವುದರಿಂದ ಸುಲಭದಲ್ಲಿ ನಾಣ್ಯ ಪಡೆಯಬಹುದು. ಆದರೆ ಗ್ರಾಮೀಣ ಭಾಗದಲ್ಲಿ ಪರಿಸ್ಥಿತಿ ಹೀಗಿರುವುದಿಲ್ಲ. ಆದ್ದರಿಂದ ಎಲ್ಲ ಬಗೆಯ ನಾಣ್ಯಗಳನ್ನೂ ಘಟಕಗಳು ಸ್ವೀಕರಿಸುವ ವ್ಯವಸ್ಥೆಯಾಗಬೇಕು ಎಂಬ ಆಗ್ರಹ ಕೇಳಿಬಂದಿದೆ.

5 ರೂಪಾಯಿ ನಾಣ್ಯ ಗೊಂದಲದಿಂದಾಗಿ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ವಿಫಲವಾಗುತ್ತಿರುವುದು ಬೇಸರ ವಿಚಾರ. ಅಧಿಕಾರಿಗಳ ಜತೆ ಚರ್ಚಿಸಿ ಎಲ್ಲ ಬಗೆಯ ನಾಣ್ಯ ಸ್ವೀಕರಿಸುವಂತೆ ಯಂತ್ರೋಪಕರಣ ಜೋಡಣೆಗೆ ಸೂಚಿಸಲಾಗುವುದು.| ಮಹಾಂತೇಶ ದೊಡ್ಡಗೌಡರ ಶಾಸಕ ಚನ್ನಮ್ಮ ಕಿತ್ತೂರುಗೋಲ್ಡ್ ಕಾಯಿನ್ ಹಾಕಿದರೆ ಮಾತ್ರ ನೀರು ದೊರೆಯುವ ವ್ಯವಸ್ಥೆ ಇದೆ. ಆದರೆ ಸಾರ್ವಜನಿಕರು ಎಲ್ಲ ಬಗೆಯ ಕಾಯಿನ್‌ಗೂ ನೀರು ಕಲ್ಪಿಸಿ ಎಂದು ಕೋರಿದ್ದಾರೆ. ಶೀಘ್ರವೇ ಅದಕ್ಕೆ ವ್ಯವಸ್ಥೆ ಮಾಡಲಾಗುವುದು.| ಪ್ರಕಾಶ ಬಿ. ಮಠದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

| ನಾಗರಾಜ ಜೋರಾಪುರ ಚನ್ನಮ್ಮನ ಕಿತ್ತೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net