

ಬಾಗಲಕೋಟೆ: ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಗೃಹಜ್ಯೋತಿ ಯೋಜನೆಗೆ ಆ.5 ರಂದು ಚಾಲನೆ ದೊರೆಯಲಿದ್ದು, ಜಿಲ್ಲೆಯ 3.10 ಲಕ್ಷ ವಿದ್ಯುತ್ ಲಾನುಭವಿಗಳು ಇದರ ಲಾಭ ಪಡೆಯಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆಗಳಾದ ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಯೋಜನೆ, ಗೃಹಲಕ್ಷ್ಮೀ ಹಾಗೂ ಯುವನಿಧಿ ಯೋಜನೆಗಳ ಕುರಿತು ಸೋಮವಾರ ನಡೆದ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 200 ಯೂನಿಟ್ ಉಚಿತವಾಗಿ ನೀಡುವ ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 4,37,482 ವಿದ್ಯುತ್ ಗ್ರಾಹಕರ ಪೈಕಿ 3,10,589 ಲಾನುಭವಿಗಳು ನೋಂದಾಯಿಸಿದ್ದು, ಶೇ.70.99 ರಷ್ಟು ಪ್ರಗತಿಯಾಗಿದೆ. ನೋಂದಣಿಗೆ 1,26,893 ಗ್ರಾಹಕರು ಬಾಕಿ ಉಳಿಸಿದ್ದು, ಕ್ರಮ ಕೈಗೊಳ್ಳಲು ಹೆಸ್ಕಾಂ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಪ್ರಭಾರಿ ಹೆಸ್ಕಾಂ ಅಧೀಕ್ಷಕ ಅಭಿಯಂತರ ಕಲೀಮ ಅಹಮ್ಮದ್ ಮಾತನಾಡಿ, ಗೃಹಜ್ಯೋತಿ ಯೋಜನೆಯಡಿ ಜು.27 ರವರೆಗೆ ನೊಂದಣಿ ಮಾಡಿದ ಲಾನುಭವಿಗಳಿಗೆ ಆಗಸ್ಟ್ ತಿಂಗಳಿನಲ್ಲಿ ಬರುವ ವಿದ್ಯುತ್ ಬಿಲ್‌ಗೆ ಅನ್ವಯವಾಗಲಿದೆ. ಜು.27ರ ನಂತರ ನೋಂದಣಿ ಮಾಡಿದ ಲಾನುಭವಿಗಳಿಗೆ ಸೆಪ್ಟೆಂಬರ್ ತಿಂಗಳಿನ ವಿದ್ಯುತ್ ಬಿಲ್‌ಗೆ ಅನ್ವಯವಾಗಲಿದೆ. ಯೋಜನೆಯನ್ನು ಪ್ರತಿಯೊಂದು ಗೃಹಜ್ಯೋತಿ ಹೊಂದಿದ ಮನೆಗಳ ನೋಂದಣಿಗೆ ಕ್ರಮ ವಹಿಸಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು. ಆ.5 ರಂದು ಯೋಜನೆಗೆ ಚಾಲನೆ ದೊರೆಯಲಿದ್ದು, ಜಿಲ್ಲಾ ಮಟ್ಟದಲ್ಲಿಯೂ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು.
ಅನ್ನಭಾಗ್ಯ ಯೋಜನೆಯಡಿ ಪ್ರಗತಿ ಪರಿಶೀಲನೆ ಮಾಡಿದ ಸಚಿವರು. ಅಂತ್ಯೋದಯ ಅನ್ನ ಯೋಜನೆಯಡಿ 14,868 ಪಡಿತರ ಚೀಟಿಯನ್ನು ಹೊಂದಿರುವ ಕುಟುಂಬದಲ್ಲಿ 3 ಅಥವಾ ಮೂರಕ್ಕಿಂತ ಕಡಿಮೆ ಸದಸ್ಯರಿರುವ ಕುಟುಂಬಗಳಿಗೆ 35 ಕೆಜಿ ಆಹಾರಧಾನ್ಯ ಪಡೆಯುತ್ತಿರುವುದರಿಂದ ಅವರಿಗೆ ನಗದು ಸೌಲಭ್ಯ ನೀಡಲಾಗುತ್ತಿಲ್ಲ. ಈಗಾಗಲೇ ಎನ್‌ಐಸಿಯಿಂದ ಸ್ವೀಕೃತಗೊಂಡ 2,99,293 ಪಡಿತರ ಚೀಟಿದಾರರ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಒಟ್ಟು 17,78,08,440 ರೂ. ಜಮೆ ಮಾಡಲಾಗಿದೆ. ಬಾಕಿ 1,19,222 ಉಳಿದಿದ್ದು, ಕ್ರಮವಹಿಸಲು ಆಹಾರ ಇಲಾಖೆ ಜಂಟಿ ನಿರ್ದೇಶಕರಿಗೆ ಸೂಚಿಸಿದರು.
ವಾಕರಸಾ ಸಂಸ್ಥೆ ಡಿಟಿಒ ಮೈತ್ರಿ ಮಾತನಾಡಿ, ಅಂತರರಾಜ್ಯ ಬಸ್‌ಗಳಲ್ಲಿ ರಾಜ್ಯದ ಬಾರ್ಡರ್ ವರೆಗೆ ಪ್ರಯಾಣಕ್ಕೆ ಅವಕಾಶ ಕೊಟ್ಟಲ್ಲಿ ಮಹಿಳೆಯರಿಗೆ ಇನ್ನಷ್ಟು ಅನುಕೂಲವಾಗುವ ಜತೆಗೆ ಸಂಸ್ಥೆಗೆ ಆದಾಯ ಕೂಡ ಹೆಚ್ಚಾಗಲಿದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಅಕ್ಕಮಹಾದೇವಿ ಕೆ.ಎಚ್. ಮಾತನಾಡಿ, ಗೃಹಲಕ್ಷ್ಮೀ ಯೋಜನೆಯಲ್ಲಿ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು, 4,28,100 ಲಾನುಭವಿಗಳ ಪೈಕಿ 2,78,458 ನೋಂದಣಿಯಾಗಿ ಶೇ.65 ರಷ್ಟು ಪ್ರಗತಿಯಾಗಿದೆ. ನೋಂದಣಿಗೆ ಮೇಲುಸ್ತುವಾರಿಯಾಗಿ ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಉಸ್ತುವಾರಿ ಸಮಿತಿಗಳನ್ನು ರಚಿಸಲಾಗಿದ್ದು, ಜಿಲ್ಲೆಯ 195 ಬಾಪೂಜಿ ಸೇವಾ ಕೇಂದ್ರ, 54 ನಗರಸಭೆಯ ಸೇವಾ ಕೇಂದ್ರಗಳು, 160 ಗ್ರಾಮ ಒನ್ ಹಾಗೂ 22 ಕರ್ನಾಟಕ ಒನ್ ಕೇಂದ್ರಗಳ ಮೂಲಕ ನೋಂದಣಿ ಮಾಡಲಾಗುತ್ತಿದೆ. ಅಲ್ಲದೆ, ನೋಂದಣಿಗೆ ಪ್ರಜಾಪ್ರತಿನಿಧಿಗಳನ್ನು ಸಹ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ನಡೆದಿದೆ. ಸಾವಿರಕ್ಕೆ ಇಬ್ಬರಂತೆ ಒಟ್ಟು 4189 ಜನ ಪ್ರಜಾಪ್ರತಿನಿಧಿಗಳನ್ನು ನೇಮಕ ಮಾಡಿಕೊಳ್ಳಬೇಕಿದೆ ಎಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಎಚ್.ವೈ.ಮೇಟಿ, ಜೆ.ಟಿ.ಪಾಟೀಲ, ವಿಜಯಾನಂದ ಕಾಶಪ್ಪನವರ, ಜಗದೀಶ ಗುಡಗುಂಟಿ, ಭೀಮಸೇನ ಚಿಮ್ಮನಕಟ್ಟಿ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ., ಜಿಪಂ ಸಿಇಒ ಶಶಿಧರ ಕುರೇರ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಉಪವಿಭಾಗಾಧಿಕಾರಿಗಳಾದ ಶ್ವೇತಾ ಬೀಡಿಕರ, ಸಂತೋಷ ಕಾಮಗೌಡ ಸೇರಿ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.