

ಹಾಸನ: ರಾಜ್ಯ ಸರ್ಕಾರದ ಪ್ರಮುಖ 5 ಗ್ಯಾರಂಟಿಗಳು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಟಾನವಾಗಿದೆ.ಕೆಲವು ಕಡೆ ಸಣ್ಣಪುಟ್ಟ ಲೋಪದೋಷಗಳಿದ್ದು ಅವುಗಳನ್ನು ಸರಿಪಡಿಸಿಕೊಳ್ಳುವಂತೆ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರ ಉಪಾಧ್ಯಕ್ಷೆ ಡಾ.ಪುಷ್ಪ ಅಮರನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಪೂರೈಸಿದ್ದು.ಹಾಸನ ಸೇರಿ ಕೆಲವು ಜಿಲ್ಲೆಗಳಲ್ಲಿ ಜಿಲ್ಲಾ ಸಮಿತಿ ಅಧ್ಯಕ್ಷರ ನೇಮಕವಾಗಬೇಕಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಬೇಕಿದ್ದು. ಶೀಘ್ರವೇ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು. ಬಳಿಕ ಸಮಗ್ರ ಪರಿಶೀಲನಾ ಸಭೆ ನಡೆಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಅನುಷ್ಟಾನಕ್ಕಾಗಿ ವಾರ್ಷಿಕ 52 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದು, ಯೋಜನೆಯಿಂದ ಯಾರೂ ಹೊರಗುಳಿಯಬಾರದು ಎಂಬ ಕಾರಣಕ್ಕೆ ಪ್ರತ್ಯೇಕ ಪ್ರಾಧಿಕಾರವನ್ನೇ ಸರ್ಕಾರ ರಚಿಸಿದೆ. ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳುತ್ತವೆ ಎಂಬ ಊಹಾಪೋಹಗಳಿಗೆ ಯಾರೂ ಕಿವಿಗೊಡಬಾರದು ಎಂದರು
ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆ ಅನುಷ್ಟಾನದಲ್ಲಿ ಚಾಮರಾಜನಗರ ಪ್ರಥಮ ಹಾಗು ಹಾಸನ ಐದನೇ ಸ್ಥಾನದಲ್ಲಿದೆ. ಗೃಹಲಕ್ಷ್ಮೀ ಯೋಜನೆಯಡಿ ಜಿಲ್ಲೆಯ 4,36,226 ಮಹಿಳೆಯರಿಗೆ ಕಳೆದ ಒಂದು ವರ್ಷದಿಂದ ಒಟ್ಟು 4.21 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು 4.18 ಕೋಟಿ ರೂ. ಫಲಾನುಭವಿಗಳಿಗೆ ತಲುಪಿದೆ. ಆ ಮೂಲಕ ಜಿಲ್ಲೆ ಶೇ. 99.17 ರಷ್ಟು ಗುರಿ ಸಾಧಿಸಿದೆ. ಯೋಜನೆ ಜಾರಿಯಾದ ದಿನದಿಂದ ಇಲ್ಲಿವರೆಗೆ 21,08,147 ಮಹಿಳೆಯರಿಗೆ ಹಣ ತಲುಪಿದೆ ಎಂದರು.
ಜಿಲ್ಲೆಯಲ್ಲಿ 4,96,260 ಪಡಿತರ ಚೀಟಿಗಳಿದ್ದು ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ. ಅಕ್ಕಿ ಬದಲಿಗೆ ಹಣ ನೀಡುತ್ತಿದ್ದು ಇದುವರೆಗೆ 2.92 ಕೋಟಿ ರೂ. ಬಿಡುಗಡೆಯಾಗಿ ಶೇ. 98.07 ರಷ್ಟು ಪ್ರಗತಿ ಸಾಧಿಸಿದೆ. ಗೃಹಜ್ಯೋತಿ ಯೋಜನೆ 2023ರಲ್ಲಿ ಅನುಷ್ಟಾನವಾಗಿದ್ದು ಜಿಲ್ಲೆಯಲ್ಲಿ 5,26,611 ಗ್ರಾಹಕರಿದ್ದಾರೆ. 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಬಳಸುತ್ತಿರುವವರ ಸಂಖ್ಯೆ 5,26,129 ಇದೆ. ಗೃಹ ಜ್ಯೋತಿ ಪ್ರಗತಿಯು ಶೇ 99.29 ರಷ್ಟಿದೆ ಎಂದರು.
ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕಾಗಿ ಶಕ್ತಿ ಯೋಜನೆ ಜಾರಿಗೊಳಿಸಿದ್ದು ಜಿಲ್ಲೆಯಲ್ಲಿ ಒಟ್ಟು ಮಹಿಳಾ ಪ್ರಯಾಣಿಕರ ಸರಾಸರಿ ಸಂಖ್ಯೆ 57,61,332 ಇದೆ. ಅದೇ ರೀತಿ ನಿರುದ್ಯೋಗಿ ಪದವಿ ಹಾಗು ಡಿಪ್ಲೋಮಾ ಅಭ್ಯರ್ಥಿಗಳಿಗೆ ಯುವ ನಿಧಿ ಯೋಜನೆ ಅನುಷ್ಟಾವಾಗಿದ್ದು ಪದವಿ ಪೂರೈಸಿದವರಿಗೆ ಪ್ರತಿ ತಿಂಗಳು 3 ಸಾವಿರ ರೂ. ಹಾಗು ಡಿಪ್ಲೋಮಾ ಪೂರ್ಣಗೊಳಿಸಿದವರಿಗೆ 1,500 ರೂ. ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 2568 ಪದವೀಧರ ಹಾಗು 64 ಡಿಪ್ಲೋಮಾ ಫಲಾನುಭವಿಗಳಿದ್ದಾರೆ. ಪದವೀಧರರಿಗೆ ಇಲ್ಲಿತನಕ 77,04,000 ರೂ. ಹಾಗು ಡಿಪ್ಲೋಮಾ ಫಲಾನುಭವಿಗಳಿಗೆ 96 ಸಾವಿರ ರೂ. ಸಂದಾಯವಾಗಿದೆ. ಯುವ ನಿಧಿ ಫಲಾನುಭವಿಗಳ ಸಂಖ್ಯೆ ಕಡಿಮೆಯಿದ್ದು ಯೋಜನೆಯಿಂದ ಹೊರಗುಳಿದಿರುವವರನ್ನು ಗುರುತಿಸಿ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಗ್ಯಾರಂಟಿ ಯೋಜನೆಗಳು ರಾಜ್ಯದ ಪ್ರತಿಯೊಬ್ಬರಿಗೂ ತಲುಪಬೇಕೆನ್ನುವುದು ನಮ ಸರ್ಕಾರದ ಉದ್ದೇಶ. ಕೇವಲ ಅಧಿಕಾರಿಗಳಿಂದ ಗುರಿ ಸಾಧನೆ ಕಷ್ಟ ಎಂಬ ಕಾರಣಕ್ಕೆ ತಾಲೂಕು ಹಾಗು ಜಿಲ್ಲಾ ಮಟ್ಟದಲ್ಲಿ ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ರಚಿಸಲಾಗಿದೆ. ರಾಜ್ಯಾದ್ಯಂತ ತಾಲ್ಲೂಕು ಮಟ್ಟದ ಅಧ್ಯಕ್ಷರು ಹಾಗು ಸದಸ್ಯರ ನೇಮಕವಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಆರ್.ಪೂರ್ಣಿಮಾ, ಉಪ ಕಾರ್ಯದರ್ಶಿ ಪರಪ್ಪಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಧರಣಿಕುಮಾರ್, ಉದ್ಯೋಗಾಧಿಕಾರಿ ವಿಜಯಲಕ್ಷ್ಮೀ ಹಾಗು ಇತರರಿದ್ದರು.