

ಕೊಳ್ಳೇಗಾಲ: ಪಾಸ್ಟಿಕ್ ಕವರ್ ಬಳಸುವುದು, ಶುಚಿತ್ವ ಕಾಪಾಡಿಕೊಳ್ಳದ ಹಾಗೂ ಇತರ ನಿಯಮ ಉಲ್ಲಂಘಿಸಿದ ಬೇಕರಿ, ಹೋಟೆಲ್, ರೆಸ್ಟೋರೆಂಟ್, ಚಿಪ್ಸ್ ಅಂಗಡಿ ಮತ್ತು ಜ್ಯೂಸ್ ಅಂಗಡಿಯನ್ನು ಬಂದ್ ಮಾಡಿಸಿ ಈ 5 ಅಂಗಡಿಗಳಿಗೆ ನಗರಸಭೆ ಅಧಿಕಾರಿಗಳು ತಲಾ 5 ಸಾವಿರ ರೂ. ದಂಡ ವಿಧಿಸಿದ್ದಾರೆ.
ನಗರಸಭೆ ಪೌರಾಯುಕ್ತ ರಮೇಶ್, ಪರಿಸರ ಇಂಜಿನಿಯರ್ ಪ್ರಸನ್ನ, ಆರೋಗ್ಯ ನಿರೀಕ್ಷಕ ಚೇತನ್ ಸೇರಿದಂತೆ ಇತರ ಸಿಬ್ಬಂದಿ, ವಿವಿಧ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಪ್ಲಾಸ್ಟಿಕ್ ಕವರ್, ಕೃತಕ ಬಣ್ಣಗಳು, ಟೇಸ್ಟಿಂಗ್ ಪೌಡರ್, ಕರಿದ ಎಣ್ಣೆ ಬಳಕೆ, ಸ್ವಚ್ಛತೆ ಕಾಪಾಡಿಕೊಳ್ಳದ ಹೋಟೆಲ್, ಬೇಕರಿ, ಜ್ಯೂಸ್ ಅಂಗಡಿ, ಚಿಪ್ಸ್ ಅಂಗಡಿ ಹಾಗೂ ರೆಸ್ಟೋರೆಂಟ್‌ಗೆ ದಂಡ ವಿಧಿಸಿ ಬಾಗಿಲು ಮುಚ್ಚಿಸಿದ್ದಾರೆ.
ಈ ವೇಳೆ ನಗರಸಭೆ ಪೌರಾಯುಕ್ತ ರಮೇಶ್ ಮಾತನಾಡಿ, ನಗರದ ಅನೇಕ ಅಂಗಡಿಗಳಲ್ಲಿ ಹೆಚ್ಚಾಗಿ ಪ್ಲಾಸ್ಟಿಕ್‌ಗಳನ್ನು ಬಳಕೆ ಮಾಡುತ್ತಿದ್ದಾರೆ. ಪ್ಲಾಸ್ಟಿಕ್ ಬಳಕೆ ಮಾಡಲು ಆದೇಶ ಇಲ್ಲದಿದ್ದರೂ ಅನೇಕ ಅಂಗಡಿಯವರು ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದಾರೆ. ಹಾಗಾಗಿ ಅಂಗಡಿಗಳ ಮೇಲೆ ದಾಳಿ ಮಾಡಿ ಪ್ಲಾಸ್ಟಿಕ್ ಕವರ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದೇವೆ ಎಂದರು.
ಇನ್ನು ಹೋಟೆಲ್‌ಗಳಲ್ಲಿ ಸ್ವಚ್ಛತೆ ಇಲ್ಲದೆ ಅಡುಗೆ ತಿಂಡಿ-ತಿನಿಸುಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ಹಿನ್ನೆಲೆ ಹೋಟೆಲ್‌ಗಳಿಗೂ ಭೇಟಿ ನೀಡಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಹಾಗೂ ತಿಂಡಿಗಳನ್ನು ಪ್ಲಾಸ್ಟಿಕ್ ಕವರ್‌ಗಳಲ್ಲಿ ಕಟ್ಟಿಕೊಡದಂತೆ ಅರಿವು ಮೂಡಿಸುವದರ ಜತೆಗೆ 5 ಅಂಗಡಿಗಳಿಗೆ ದಂಡ ವಿಧಿಸಿದ್ದೇವೆ ಎಂದರು.
ಕೆಲ ಹೋಟೆಲ್, ಬೇಕರಿ, ಜ್ಯೂಸ್ ಅಂಗಡಿ, ಚಿಪ್ಸ್ ಅಂಗಡಿ ಮೇಲೆ ದಾಳಿ ಮಾಡಿ ಒಬ್ಬೊಬ್ಬರಿಗೆ 5 ಸಾವಿರ ರೂ. ನಂತೆ 25 ಸಾವಿರ ರೂ. ದಂಡವನ್ನು ಅಂಗಡಿ ಮಾಲೀಕರಿಂದ ಕಟ್ಟಿಸಿದ್ದೇವೆ. ಬೇಕರಿ ಹಾಗೂ ಹೋಟೆಲ್‌ಗಳಲ್ಲಿ ಕೃತಕ ಬಣ್ಣಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ ಎಂಬ ದೂರುಗಳು ಸಹ ಕೇಳಿ ಬಂದಿವೆ. ಹಾಗಾಗಿ ಇಂದು ಕೆಲವೇ ಹೋಟೆಲ್ ಹಾಗೂ ಬೇಕರಿಯ ಮೇಲೆ ದಾಳಿ ಮಾಡಿದ್ದೇವೆ. ನಾಳೆಯಿಂದ ಎಲ್ಲ ಅಂಗಡಿಗಳಿಗೂ ಹೋಗಿ ಭೇಟಿ ನೀಡಿ, ದಂಡ ವಿಧಿಸುತ್ತೇವೆ ಎಂದರು.
ಕಡ್ಡಾಯವಾಗಿ ಪ್ರತಿಯೊಬ್ಬರೂ ಅಂಗಡಿ ಲೈಸೆನ್ಸ್ ಪಡೆದುಕೊಂಡಿರಬೇಕು. ಇಲ್ಲದಿದ್ದರೆ ಅಂಗಡಿಯನ್ನು ಬಂದ್ ಮಾಡುತ್ತೇವೆ. ಮುಂದೆ ಪ್ಲಾಸ್ಟಿಕ್ ಕವರ್ ಕೃತಕ ಬಣ್ಣಗಳನ್ನು ಬಳಸಿ ಗ್ರಾಹಕರಿಗೆ ತಿಂಡಿ-ತಿನಿಸುಗಳನ್ನು ನೀಡಿದರೆ ಅಂಗಡಿಗಳನ್ನು ಶಾಶ್ವತವಾಗಿ ಬಂದ್ ಮಾಡಲು ನಗರಸಭೆಯಿಂದ ತೀರ್ಮಾನ ಕೈಗೊಂಡಿದ್ದೇವೆ. ಹಾಗಾಗಿ ನಾಳೆಯಿಂದ ಎರಡು -ಮೂರು ತಂಡಗಳನ್ನು ರಚನೆ ಮಾಡಿ ಹೆಚ್ಚಾಗಿ ಕಾರ್ಯಾಚರಣೆ ನಡೆಸುತ್ತೇವೆ ಎಂದು ಮಾಹಿತಿ ನೀಡಿದರು.
ದಾಳಿ ವೇಳೆ ನಗರಸಭೆಯ ಸ್ಯಾನಿಟರಿ ಸೂಪರ್‌ವೈಸರ್ ಪುನೀತ್, ವಿನೋದ್, ಪ್ರದೀಪ್ ಇತರರು ಇದ್ದರು.