ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಅಪರಾಧಿಗೆ 5 ವರ್ಷ ಕಠಿಣ ಶಿಕ್ಷೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಂಗಳೂರು: ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ - ಎಫ್ ಟಿಎಸ್ ಸಿ-1 (ಪೋಕ್ಸೋ) ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿಗೆ ನ್ಯಾಯಾಲಯ 5 ವರ್ಷ ಕಠಿನ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಅಶೋಕ್ ಕೆ. (50) ಶಿಕ್ಷೆಗೊಳಗಾದ ಅಪರಾಧಿ.
ಪ್ರಕರಣದ ಹಿನ್ನೆಲೆ: 2025ರ ಮೇ 4ರಂದು ನೆರೆ ಮನೆಯ ಅಂಗಳದಲ್ಲಿ ಆಡುತ್ತಿದ್ದ ಮೂರು ವರ್ಷ ಎಂಟು ತಿಂಗಳ ಮಗುವಿಗೆ ನೆರೆ ಮನೆಯ ಅಶೋಕ್ ಎಂಬಾತ ತನ್ನ ಮನೆಗೆ ಕರೆಸಿ ತಿಂಡಿಕೊಟ್ಟಿದ್ದಾನೆ. ಪ್ಲೇಟ್ ನಲ್ಲಿ ತಿಂಡಿ ತಿನ್ನುತ್ತಾ ಮಗು ತನ್ನ ಮನೆಗೆ ಬಂದಿದೆ. ತಿಂಡಿ ತಿಂದ ಬಳಿಕ ಮಗುವಿನ ಪ್ಲೇಟ್ ಕೊಟ್ಟು ಬರುವಂತೆ ಮಗುವಿಗೆ ತಾಯಿ ಹೇಳಿದ್ದಾಳೆ. ಅದರಂತೆ ಮಗು ಪ್ಲೇಟ್ ಕೊಡಲು ಅಶೋಕ್ ನ ಮನೆಗೆ ಹೋಗಿದ್ದು, ಆ ವೇಳೆ ಆತ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಬಗ್ಗೆ ಮಗುವಿನ ತಾಯಿ ನೀಡಿದ ದೂರಿನಂತೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಸಿಪಿ ನಜ್ಮಾ ಫಾರೂಕಿ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದಾರೆ.
ವಾದ - ಪ್ರತಿವಾದ ಆಲಿಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ - ಎಫ್ ಟಿಎಸ್ ಸಿ-1 (ಪೋಕ್ಸೋ) ನ್ಯಾಯಾಲಯದ ನ್ಯಾಯಾಧೀಶ ಮೋಹನ ಜೆ.ಎಸ್. ಅವರು, ಅಶೋಕ್ ಮೇಲಿನ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಜು.16ರಂದು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ಚದಾರೆ. ಪೋಕ್ಸೋ ಕಲಂ (10)ರಡಿ 5ವರ್ಷಗಳ ಕಠಿನ ಶಿಕ್ಷೆ ಮತ್ತು 60 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ತೆರಲು ತಪ್ಪಿದಲ್ಲಿ ಒಂದು ವರ್ಷ ಸಾದಾ ಸಜೆ ಅನುಭವಿಸುವಂತೆಯೂ ತೀರ್ಪಿನಲ್ಲಿ ತಿಳಿಸಲಾಗಿದೆ. ಸರ್ಕಾರದ ಪರವಾಗಿ ಪೋಕ್ಸೋ ವಿಶೇಷ ಸರ್ಕಾರಿ ಅಭಿಯೋಜಕಿ ಸಹನಾದೇವಿ ಬೋಳೂರು ವಾದ ಮಂಡಿಸಿದ್ದಾರೆ.
1.50 ಲಕ್ಷ ರೂ. ಪರಿಹಾರ
ದಂಡ ಮೊತ್ತದಲ್ಲಿ 50 ಸಾವಿರ ರೂ. ಸಂತ್ರಸ್ತ ಮಗುವಿಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಧೀಶರು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಮಾತ್ರವಲ್ಲದೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ 1 ಲಕ್ಷ ರೂ. ಪರಿಹಾರವನ್ನು ಧನವನ್ನು ನೀಡುವಂತೆ ಶಿಫಾರಸ್ಸು ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net