

ಬಾಳೆಹೊನ್ನೂರು: ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ತಮ್ಮ 33ನೇ ವರ್ಷದ ಶ್ರಾವಣ ಮಾಸದ ಇಷ್ಟಲಿಂಗ ಮಹಾಪೂಜಾ ತಪೋನುಷ್ಠಾನವನ್ನು ಆಗಸ್ಟ್ 5 ರಿಂದ ಸೆಪ್ಟೆಂಬರ್ 2ರವರೆಗೆ ನಡೆಯಲಿದೆ.
ಜಗದ್ಗುರುಗಳ ಶ್ರಾವಣ ತಪೋನುಷ್ಠಾನದ ಅಂಗವಾಗಿ ಬಾಳೆಹೊನ್ನೂರಿನ ಶ್ರೀ ಜಗದ್ಗುರು ರಂಭಾಪುರಿ ಮಹಾ ಸಂಸ್ಥಾನ ಪೀಠದಲ್ಲಿ ತ್ರಿಕಾಲ ಇಷ್ಟಲಿಂಗ ಮಹಾ ಪೂಜಾನುಷ್ಠಾನ ನಡೆಯಲಿದ್ದು, ಪ್ರತಿದಿನ ಬೆಳಗ್ಗೆ 8.30ಕ್ಕೆ ನಡೆಸುವ ಮಹಾಪೂಜೆಯಲ್ಲಿ ಭಕ್ತರಿಗೆ ಭಾಗವಹಿಸಲು ಅವಕಾಶವಿದೆ ಎಂದು ಶ್ರೀ ಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್.ಬಾಳನಗೌಡರ್ ತಿಳಿಸಿದ್ದಾರೆ.
ಆ.8 ರಂದು ಲಿಂ.ಶ್ರೀರಂಭಾಪುರಿ ಜಗದ್ಗುರು ಶಿವಾನಂದ ರಾಜೇಂದ್ರ ಶಿವಾಚಾರ್ಯ ಭಗವತ್ಪಾದರ 77ನೇ ವರ್ಷದ ಪುಣ್ಯ ಸ್ಮರಣೋತ್ಸವ ನಡೆಯಲಿದ್ದು, ಖಾಂಡ್ಯ ಮತ್ತು ಜಾಗರ ಹೋಬಳಿ ಶಿಷ್ಯಸದ್ಭಕ್ತರಿಂದ ದಾಸೋಹ ಸೇವೆ ನಡೆಯಲಿದೆ.
12 ರಂದು ಲಿಂ.ಶ್ರೀ ರಂಭಾಪುರಿ ಜಗದ್ಗುರು ವೀರರುದ್ರಮುನಿದೇವ ಶಿವಾಚಾರ್ಯ ಭಗವತ್ಪಾದರ 32ನೇ ವರ್ಷದ ಪುಣ್ಯ ಸ್ಮರಣೋತ್ಸವ ನಡೆಯಲಿದೆ. ಆಲ್ದೂರು ಹೋಬಳಿ ವೀರಶೈವ ಸಮಾಜದಿಂದ ಪೂಜಾ ಹಾಗೂ ದಾಸೋಹ ಸೇವೆ ನಡೆಯಲಿದೆ. ಶ್ರಾವಣ ಮಾಸ ಪರ್ಯಂತರ ಮಹಾರುದ್ರಾಭಿಷೇಕ ಹಾಗೂ ಸಿಹಿ ಪ್ರಸಾದ ವಿತರಣೆ ಸೇವೆಯನ್ನು ಭದ್ರಾವತಿಯ ಲಿಂ.ಎಸ್.ಜಿ.ಶಿವಶಂಕರಯ್ಯನವರ ಮಕ್ಕಳು ನೇರವೇರಿಸುವರು.
ಶ್ರಾವಣ ಮಾಸದ ಅಂಗವಾಗಿ ಪ್ರತಿ ದಿನ ಸಂಜೆ 7 ಗಂಟೆಗೆ ಮಹಾರಾಷ್ಟ್ರದ ಉಟಗಿ ಹಿರೇಮಠದ ಶಿವಪ್ರಸಾದ ಅವರಿಂದ ಜಗದ್ಗುರು ರೇಣುಕಾ ವಿಜಯ ಪುರಾಣ ಪ್ರವಚನ ನಡೆಯಲಿದ್ದು, ಪಟ್ಟಾಧ್ಯಕ್ಷರಿಂದ ಹಾಗೂ ವಾಗ್ಮಿಗಳಿಂದ ನುಡಿ ಸೇವೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಪ್ರತಿ ಸೋಮವಾರ ಹಾಗೂ ಗುರುವಾರ ರಂಭಾಪುರಿ ಜಗದ್ಗುರುಗಳು ಶುಭಾಶೀರ್ವಾದ ಸಂದೇಶ ನೀಡುವರು.
ಪ್ರತಿ ನಿತ್ಯ ಬೆಳಗ್ಗೆ ಜಗದ್ಗುರು ರೇಣುಕಾಚಾರ್ಯರು, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿಗೆ, ಶ್ರೀ ಸೋಮೇಶ್ವರ ಮಹಾಲಿಂಗಕ್ಕೆ, ಶಕ್ತಿಮಾತೆ ಚೌಡೇಶ್ವರಿ-ಭದ್ರಕಾಳಿ, ಪಾರ್ವತಿ ಅಮ್ಮನವರಿಗೆ ಹಾಗೂ ಲಿಂಗೈಕ್ಯ ಜಗದ್ಗುರುಗಳವರ ಗದ್ದುಗೆಗಳಿಗೆ ಮಹಾರುದ್ರಾಭಿಷೇಕ, ಅಷ್ಟೋತ್ತರ, ಮಹಾಮಂಗಲ ವಿಶೇಷ ಪೂಜೆ ನಡೆಯಲಿದೆ.