

ಗೋಣಿಕೊಪ್ಪ: ಬಿಟ್ಟಂಗಾಲ ಸಮೀಪದ ವಿ. ಬಾಡಗದ ಹೈ ಪ್ಲೈಯರ್ಸ್ ಸಂಸ್ಥೆ ವತಿಯಿಂದ ಸ್ಥಳೀಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿರುವ ವಿರಾಜಪೇಟೆ ತಾಲೂಕಿನ ಬೇರಳಿನಾಡು, ಕುತ್ತುನಾಡು ಮತ್ತು ಬೊಟ್ಟಿಯತ್ ನಾಡು ವ್ಯಾಪ್ತಿಯ 2ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಬುಧವಾರ 5 ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಿದವು.
ದಿನದ ಮೊದಲ ಪಂದ್ಯದಲ್ಲಿ ಕರ್ತಮಾಡ ತಂಡ 4-2 ಗೋಲುಗಳಿಂದ ಮನೆಯಪಂಡ ತಂಡವನ್ನು ಸೋಲಿಸಿತು. ವಿಜೇತ ತಂಡದ ಪರ ರೋಷನ್ 8ನೇ ನಿಮಿಷದಲ್ಲಿ, ಅತಿಥಿ ಆಟಗಾರ ಬೆಳ್ಳಿಯಪ್ಪ 14ನೇ, 22ನೇ ಮತ್ತು 42ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಮನೆಯಪಂಡ ತಂಡದ ಪರವಾಗಿ ಅಯ್ಯಣ್ಣ 28ನೇ ಮತ್ತು 34ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. 2ನೇ ಪಂದ್ಯದಲ್ಲಿ ಕೊಂಗಂಡ ತಂಡ 1-0 ಗೋಲಿನಿಂದ ಕೊಲ್ಲಿರ ತಂಡವನ್ನು ಮಣಿಸಿತು. ವಿಜೇತ ತಂಡದ ಪರ ಅತಿಥಿ ಆಟಗಾರ ಚೆಲ್ಸಿ ಮೇದಪ್ಪ 39ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.
3ನೇ ಪಂದ್ಯದಲ್ಲಿ ಗುಮ್ಮಟ್ಟಿರ ತಂಡ 2-0 ಗೋಲುಗಳಿಂದ ಕೋಲತಂಡ ತಂಡವನ್ನು ಪರಾಭವಗೊಳಿಸಿತು. ವಿಜೇತ ತಂಡದ ಪರ ಅತಿಥಿ ಆಟಗಾರ ಬೋಪಣ್ಣ 14ನೇ ಮತ್ತು 40ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. 4ನೇ ಪಂದ್ಯದಲ್ಲಿ ಕುಪ್ಪಂಡ ತಂಡ ಗೈರಾದ ಕಾರಣ ಸಣ್ಣುವಂಡ ತಂಡ ವಾಕ್ ಓವರ್ ಮೂಲಕ ಮುನ್ನಡೆ ಪಡೆಯಿತು. ದಿನದ ಕೊನೆಯ ಪಂದ್ಯದಲ್ಲಿ ಚೇಂದಿರ ತಂಡ 4-1 ಗೋಲುಗಳಿಂದ ಚೊಟ್ಟೆಪಂಡ ತಂಡವನ್ನು ಮಣಿಸಿತು. ವಿಜೇತ ತಂಡದ ಪರ ಅತಿಥಿ ಆಟಗಾರರಾದ ಮಂಜುನಾಥ್ 6ನೇ ಮತ್ತು 41ನೇ ನಿಮಿಷ, ಧನುಷ್ 35ನೇ ಮತ್ತು 49ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಪರಾಜಿತ ತಂಡದ ಪರವಾಗಿ ಕೌಶಿಕ್ ಕಾಳಪ್ಪ 40ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಆಯೋಜಕರ ಮನವಿ ಮೇರೆಗೆ ಆಗಮಿಸಿದ್ದ ಶಾಸಕ ಎ.ಎಸ್. ಪೊನ್ನಣ್ಣ, ಆಟಗಾರರನ್ನು ಪರಿಚಯಿಸಿಕೊಳ್ಳುವ ಮೂಲಕ ಪಂದ್ಯಕ್ಕೆ ಚಾಲನೆ ನೀಡಿದರು. ಕೆಲ ಸಮಯ ಪಂದ್ಯಾವಳಿ ವೀಕ್ಷಿಸಿದರು.
ಇಂದಿನ ಪಂದ್ಯಗಳ ವಿವರ
ಬೆ.10.00ಕ್ಕೆ : ಚೇಂದಿರ ಮತ್ತು ಸಣ್ಣುವಂಡ
ಬೆ.11.30ಕ್ಕೆ: ಗುಮ್ಮಟ್ಟಿರ ಮತ್ತು ಚಂದೂರ
ಮ.1:30ಕ್ಕೆ: ಮೇಚಿಯಂಡ ಮತ್ತು ಕರ್ತಮಾಡ
ಮ.3.00ಕ್ಕೆ: ಅಮ್ಮಣಿಚಂಡ ಮತ್ತು ಕೊಂಗಂಡ