

ಧಾರವಾಡ: ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಕಳೆದ 3 ದಿನಗಳಿಂದ ಜಿಲ್ಲೆಯ ವಿವಿಧೆಡೆ 30 ಮನೆಗಳಿಗೆ ಹಾನಿಯಾಗಿದೆ. ಗೋಡೆ ಕುಸಿದು 5 ಕುರಿ ಮರಿಗಳು ಮೃತಪಟ್ಟಿವೆ.
ಧಾರವಾಡ ತಾಲೂಕಿನಲ್ಲಿ 13, ಹುಬ್ಬಳ್ಳಿ ಗ್ರಾಮೀಣದಲ್ಲಿ 3, ಅಳ್ನಾವರ 3, ಹುಬ್ಬಳ್ಳಿ ಶಹರದಲ್ಲಿ 2, ಕುಂದಗೋಳದಲ್ಲಿ 2 ಮತ್ತು ಕಲಟಗಿ ತಾಲೂಕಿನಲ್ಲಿ 2 ತೀವ್ರ ಹಾಗೂ 5 ಭಾಗಶಃ ಸೇರಿ 30 ಮನೆಗಳಿಗೆ ಹಾನಿಯಾಗಿದೆ.
ಶುಕ್ರವಾರ ರಾತ್ರಿ ನಿರಂತರ ಮಳೆಯಾಗಿದ್ದರಿಂದ ಹುಬ್ಬಳ್ಳಿ ತಾಲೂಕಿನ ಕಟ್ನೂರು ಗ್ರಾಮದ ಶಿವನಗೌಡ ಹೊಳೆಪ್ಪಗೌಡ ಪಾಟೀಲ ಎಂಬುವರ ಮನೆಯ ಗೋಡೆ ಕುಸಿದು ಅವರ 5 ಕುರಿ ಮರಿಗಳು ಮೃತಪಟ್ಟಿವೆ.
ಗ್ರಾಮ ಅಡಳಿತ ಅಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ತಹಸೀಲ್ದಾರರಿಗೆ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ. ಅರ್ಹ ಫಲಾನುಭವಿಗಳಿಗೆ ಸರ್ಕಾರದ ನಿಯಮಾವಳಿಯಂತೆ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಶನಿವಾರ ದಿನವಿಡಿ ಜಿಟಿ ಜಿಟಿ ಮಳೆ ಸುರಿಯಿತು. ಕಳೆದ ನಾಲ್ಕೈದು ದಿನಗಳಂತೆ ಮಳೆ ರಭಸದಿಂದ ಕೂಡಿರದಿದ್ದರೂ ಆಗಾಗ ಹದವಾಗಿ ಮಳೆಯಾಗಿದೆ. ಶನಿವಾರ ಬೆಳಗ್ಗೆಯವರೆಗೆ ಹುಬ್ಬಳ್ಳಿ ಹೋಬಳಿಯಲ್ಲಿ 15ಎಂಎಂ., ಛಬ್ಬಿ-25.8 ಎಂಎಂ, ಶಿರಗುಪ್ಪಿ-12.8 ಎಂಎಂ ಹಾಗೂ ಬ್ಯಾಹಟ್ಟಿ ಹೋಬಳಿಯಲ್ಲಿ 13 ಎಂಎಂ ಮಳೆಯಾಗಿದೆ.
ಹುಬ್ಬಳ್ಳಿಯಲ್ಲಿ ಉಣಕಲ್ ಕೆರೆ ತುಂಬಿ ಕೋಡಿ ಹರಿದಿದ್ದು, ಹೆಚ್ಚಾದ ನೀರು ನಾಲಾ ಮೂಲಕ ಹರಿಯುತ್ತಿದೆ. ನಾಲಾ ನೀರು ತಗ್ಗು ಪ್ರದೇಶಗಳಿಗೆ ನುಗ್ಗುವ ಸಾಧ್ಯತೆಗಳಿವೆ.