

ಶಿವಮೊಗ್ಗ: ಭದ್ರಾವತಿ ತಾಲೂಕಿನ ರಾಮಿನಕೊಪ್ಪ ಕ್ರಾಸ್ ಬಳಿ ದರೋಡೆಗೆ ಹೊಂಚು ಹಾಕುತ್ತಿದ್ದ ಅಂತರ್ ಜಿಲ್ಲಾ ದರೋಡೆಕೋರರನ್ನು ಗುರುವಾರ ಬೆಳಗಿನಜಾವ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದು 30,500 ರೂ. ಮೌಲ್ಯದ ಬಂಗಾರದ ಉಂಗುರಗಳು ಮತ್ತು 7 ಲಕ್ಷ ರೂ. ಮೌಲ್ಯದ ಕಾರು ವಶಕ್ಕೆ ಪಡೆದಿದ್ದಾರೆ.
ಹಾಸನ ಜಿಲ್ಲೆಯ ಹಿರಿಸಾವೆ ಗ್ರಾಮದ ಎಂ.ಎನ್.ಲಯನ್ ಅಲಿಯಾಸ್ ಸಿಂಹ (23), ನಿಖಿಲ್ (23), ಸುಬ್ಬನಹಳ್ಳಿಯ ಸಿ.ಕೌಶಿಕ್‌ಕುಮಾರ್ (23), ಬೆಂಗಳೂರಿನ ಸಂಜೀವಿನಿ ನಗರದ ಮಧುಸೂಧನ್ ಅಲಿಯಾಸ್ ಮಧು (19) ಹಾಗೂ ವಿಜಯನಗರದ ಅರ್ಜುನ್ (22) ಬಂಧಿತರು.
ಆರೋಪಿತರು ಮಂಡ್ಯ ಜಿಲ್ಲೆಯ ಬೆಳಕವಾಡಿ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಗುರುವಾರ ಬೆಳಗಿನ ಜಾವ ರಾಮಿನಕೊಪ್ಪ ಕ್ರಾಸ್ ಬಳಿ ದರೋಡೆಗೆ ಹೊಂಚು ಹಾಕುತ್ತಿದ್ದು ಖಚಿತ ಮಾಹಿತಿ ಮೇರೆಗೆ ಭದ್ರಾವತಿ ಉಪ ವಿಭಾಗದ ಡಿವೈಎಸ್ಪಿ ಸುಧಾಕರ್ ನಾಯ್ಕ ಮಾರ್ಗದರ್ಶನದಲ್ಲಿ ಗ್ರಾಮಾಂತರ ಸಿಪಿಐ ಇ.ಒ.ಮಂಜುನಾಥ್ ನೇತೃತ್ವದಲ್ಲಿ ಎಎಸ್‌ಐ ಕೃಷ್ಣಮೂರ್ತಿ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಕೃತ್ಯಕ್ಕೆ ಬಳಸಿದ ಆಯುಧಗಳು, ಕಾರು ಮತ್ತು 3 ಬಂಗಾರದ ಉಂಗುರಗಳನ್ನು ಜಪ್ತಿ ಮಾಡಿದ್ದಾರೆ. ಬಂಧಿತರನ್ನು ನ್ಯಾಯಾಧೀಶರ ಎದುರು ಹಾಜರು ಪಡಿಸಿದ್ದಾರೆ. ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.