

ಜಮಖಂಡಿ: ಶ್ರಾವಣ ಮಾಸದ ನಿಮಿತ್ತ ಆ. 5 ರಿಂದ 19ರ ವರೆಗೆ ನಿತ್ಯ ಸಂಜೆ 6ರಿಂದ 7.30ರ ವರೆಗೆ ಬಸವ ದರ್ಶನ ಪ್ರವಚನ ಕಾರ್ಯಕ್ರಮವನ್ನು ಶ್ರೀ ದಾನಮ್ಮದೇವಿ ಟ್ರಸ್ಟ್ ಆಶ್ರಯದಲ್ಲಿ ಕುಂಚನೂರ ರಸ್ತೆ ಪಕ್ಕದ ಶ್ರೀ ದಾನಮ್ಮದೇವಿ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ಬಸವರಾಜ ಬಳಗಾರ ಹೇಳಿದರು.
ಕಾನಿಪ ಸಂಘದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ಬಸವಯೋಗ ಮಂದಿರದ ಮಾತೋಶ್ರೀ ಅಕ್ಕನಾಗಲಾಂಬಿಕೆ ಪ್ರವಚನ ನೀಡುವರು. ಬಸವತತ್ತ್ವ ಪ್ರಚಾರಾರ್ಥ ಹಮ್ಮಿಕೊಳ್ಳಲಾಗಿರುವ ಪ್ರವಚನದ ಪ್ರಯೋಜನವನ್ನು ಸರ್ವ ಸಮಾಜದವರು ಪಡೆದುಕೊಳ್ಳಬೇಕು. ಯಾವುದಾದರೊಂದು ಭಾನುವಾರ ಮಕ್ಕಳಿಗೆ ಲಿಂಗದೀಕ್ಷೆ ಕಾರ್ಯಕ್ರಮ ನಡೆಯಲಿದ್ದು, ಆ ದಿನ ನಂತರ ತಿಳಿಸಲಾಗುವುದು ಎಂದರು.
ಶ್ರೀದಾನಮ್ಮದೇವಿ ಟ್ರಸ್ಟ್‌ನ ಅಧ್ಯಕ್ಷ ಸಿ.ಎಸ್. ಬಾಂಗಿ ಮಾತನಾಡಿ, ನಿತ್ಯ ಸಂಜೆ 6 ರಿಂದ 6.30 ರ ವರೆಗೆ ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಹನುಮಂತ ಶಿರೋಳ ಹಾಗೂ ರವಿಕುಮಾರ ಬೆಣ್ಣೆ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಬಳಿಕ ಪ್ರವಚನ ಆರಂಭವಾಗುತ್ತದೆ ಎಂದು ಹೇಳಿದರು.
ಶ್ರಾವಣ ಮಾಸದ ಮೂರನೇ ಸೋಮವಾರ ನಡೆಯುವ ಶ್ರೀ ದಾನಮ್ಮದೇವಿ ಜಾತ್ರಾ ಮಹೋತ್ಸವದಂಗವಾಗಿ ಮುತ್ತೈದೆಯರ ಉಡಿ ತುಂಬುವ ಕಾರ್ಯಕ್ರಮ ನಡೆಸಲಾಗುವುದು. ಅಂದೇ ಪ್ರವಚನ ಮಂಗಲಗೊಳ್ಳಲಿದೆ. ಮಹಾಪ್ರಸಾದದ ವ್ಯವಸ್ಥೆ ಮಾಡಲಾಗುವುದು. ಕಾರ್ಯಕ್ರಮದ ಪೂರ್ವಸಿದ್ಧತೆ ಭರದಿಂದ ಸಾಗಿದೆ ಎಂದು ಹೇಳಿದರು.
ಸಿ.ಆರ್. ಅನಂತಪೂರ, ಮಹಾದೇವ ಸಾವಳಗಿ, ಸದಾನಂದ ಬಾಗೇವಾಡಿ, ಮಲ್ಲು ಮುದಕನ್ನವರ, ಮಹಾಂತೇಶ ಅಂಗಡಿ, ಚಂದ್ರಶೇಖರ ಜತ್ತಿ ಇದ್ದರು.