

ಹಾನಗಲ್ಲ: ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯನ್ನು ಶೇ. 5ರಷ್ಟು ಹೆಚ್ಚಳ ಮಾಡಲಾಯಿತು.
ವಿಷಯ ಪ್ರಸ್ತಾಪಿಸಿದ ಮುಖ್ಯಾಧಿಕಾರಿ ವೈ.ಕೆ. ಜಗದೀಶ, ಆಸ್ತಿ ತೆರಿಗೆ ಶೇ. 5ರಷ್ಟು ಹೆಚ್ಚಳಕ್ಕೆ ಒಪ್ಪಿಗೆ ನೀಡಲು ಮನವಿ ಮಾಡಿದರು. ಆದರೆ, ಸದಸ್ಯರು ಈ ಬಾರಿ ಆಸ್ತಿ ತೆರಿಗೆ ಹೆಚ್ಚಳ ಬೇಡ ಎಂದು ಪಟ್ಟು ಹಿಡಿದರು. ಅಂತಿಮವಾಗಿ ಶೇ. 1.5ರಷ್ಟು ಹೆಚ್ಚಳಕ್ಕೆ ಸದಸ್ಯರು ಒಪ್ಪಿದರಾದರೂ, ಅನುದಾನದ ಕೊರತೆಯಿದ್ದು ಶೇ. 5 ಹೆಚ್ಚಳ ಅನಿವಾರ್ಯ ಎಂದು ಮುಖ್ಯಾಧಿಕಾರಿ ಘೊಷಿಸಿದರು.
ನಾಗಪ್ಪ ಸವದತ್ತಿ ಮಾತನಾಡಿ, ಇಂದಿರಾ ಕ್ಯಾಂಟೀನ್ಗೆ ಪುರಸಭೆ ಹಣ ಬಳಸಬೇಡಿ. ತಾಪಂ ಹಾಗೂ ಶಾಸಕರ ಅನುದಾನದಲ್ಲಿ ಅದರ ಕೆಲಸವಾಗಲಿ. ಇದು ಪುರಸಭೆ ಸಾಮಾನ್ಯ ಸಭೆಯ ನಿರ್ಣಯ ಎಂದು ಮೇಲಧಿಕಾರಿಗಳಿಗೆ ತಿಳಿಸಲು ಸೂಚಿಸಿದರು.
ಸ್ವಚ್ಛತೆಗೆ ನಿರ್ಲಕ್ಷ್ಯ ತೋರಿದ್ದಕ್ಕೆ ಆಕ್ರೋಶ: ಇಂದಿರಾನಗರದ ಸ್ವಚ್ಛತೆಗೆ ನಿರ್ಲಕ್ಷ್ಯ ತೋರಿದ್ದರಿಂದ ಆಕ್ರೋಶಗೊಂಡ ಸದಸ್ಯ ಜಮೀರಅಹ್ಮದ್ ಶೇಖ್, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇಂದಿರಾ ನಗರದ 19ನೇ ವಾರ್ಡ್ ಕೊಳೆಗೇರಿ ಎಂದು ಹೇಳುತ್ತೀರಿ. ಅದನ್ನು ಸ್ವಚ್ಛವಾಗಿಡಲು ನಿಮಗೆ ಕಾಳಜಿ ಇಲ್ಲ. ನೀವು 19ನೇ ವಾರ್ಡ್ ಕಡೆಗೆ ಕಣ್ಣು ಹಾಯಿಸಿಲ್ಲ ಎಂದು ವಾಸ್ತವವನ್ನು ಪುರಸಭೆ ಮುಖ್ಯಾಧಿಕಾರಿ ಎದುರು ಬಿಚ್ಚಿಟ್ಟರು. ಅಲ್ಲದೆ, ಪುರಸಭೆ ವಿರುದ್ಧ ಪ್ರತಿಭಟನೆ ನಡೆಸುವ ನಿರ್ಧಾರ ಘೊಷಿಸಿದರು. ಆಗ ಮುಖ್ಯಾಧಿಕಾರಿ ವೈ.ಕೆ. ಜಗದೀಶ, ಪೌರ ಕಾರ್ವಿುಕರ ಕೊರತೆಯಿದೆ. ಹೊರ ಗುತ್ತಿಗೆಯಲ್ಲಿ ಸಿಬ್ಬಂದಿ ನೇಮಿಸಲು ಅವಕಾಶವಿಲ್ಲ. 17 ಸಿಬ್ಬಂದಿ ನೇಮಕದ ಪ್ರಕ್ರಿಯೆ ಚಾಲನೆಯಲ್ಲಿದೆ. ನಾಳೆಯೇ ಇಂದಿರಾ ನಗರದ ಎಲ್ಲ ಚರಂಡಿ ಸ್ವಚ್ಛತೆಗೆ ಕ್ರಮ ಜರುಗಿಸುತ್ತೇನೆ ಎಂದು ಭರವಸೆ ನೀಡಿ, ಪ್ರತಿಭಟನೆ ನಡೆಸದಂತೆ ಮನವಿ ಮಾಡಿದರು.
ಹಲವೆಡೆ ಅರ್ಧ ಕಾಮಗಾರಿ ಮಾಡಿ ಪೂರ್ಣ ಬಿಲ್ ತೆಗೆದಿದ್ದೀರಿ. ನಗರದ ಸ್ವಚ್ಛತೆಗೆ ತೀರಾ ನಿರ್ಲಕ್ಷ್ಯ ವಹಿಸಿದ್ದೀರಿ. ಕ್ರಿಯಾ ಯೋಜನೆ ರೂಪಿಸುವಾಗ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ. ಕುಮಾರೇಶ್ವರ ನಗರದ ರೋಶನಿ ಸಂಸ್ಥೆ ಬಳಿ ನೀರು ನಿಂತು ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಆಸ್ತಿಗಳ ಉತಾರ ನೀಡಲು ಅನಗತ್ಯ ವಿಳಂಬ ಮಾಡುತ್ತಿರುವ ಬಗ್ಗೆ ದೂರುಗಳಿವೆ. ಇದನ್ನು ಮುಖ್ಯಾಧಿಕಾರಿ ಗಮನಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಅಧ್ಯಕ್ಷ ಪರಶುರಾಮ ಖಂಡೂನವರ, ಉಪಾಧ್ಯಕ್ಷೆ ವೀಣಾ ಗುಡಿ, ಸುರೇಶ ನಾಗಣ್ಣನವರ, ಖುರ್ಷಿದ್ಅಹಮ್ಮದ ಹುಲ್ಲತ್ತಿ, ವಿರೂಪಾಕ್ಷಪ್ಪ ಕಡಬಗೇರಿ, ರವಿ ಹನುಮನಕೊಪ್ಪ, ರಾಧಿಕಾ ದೇಶಪಾಂಡೆ, ಶೋಭಾ ಉಗ್ರಣ್ಣನವರ, ಹಸೀನಾಬಾನು ನಾಯಕನವರ ಇತರರಿದ್ದರು.