

ಕೋಲಾರ: ಹಸುಗಳನ್ನು ಕದ್ದು ಬೆಂಗಳೂರಿಗೆ ಸಾಗಿಸಿದ ಐವರು ಆರೋಪಿಗಳನ್ನು, ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ನಗರದ ಪೂಲ್ಷಾ ನಗರದ ಸೈಯದ್ ನಿಜಾಂ (24) ಮುಹೀನ್ ಪಾಷಾ (20) ಮುಸ್ತುಕ್ (22) ಹಾಗೂ ಆಸೀಫ್ ಪಾಷಾ (21) ಬಂಧಿತರು. ಜಿಲ್ಲೆಯಲ್ಲಿ ಇತ್ತೀಚೆಗೆ ಹಸುಗಳ ಕಳವು ಪ್ರಕರಣಗಳು ಹೆಚ್ಚಾಗುತ್ತಿದ್ದು, ಗಸ್ತಿನಲ್ಲಿದ್ದಾಗ ಇನ್ಸ್ಪೆಕ್ಟರ್ ಕೆ.ಕಾಂತರಾಜ ನೇತೃತ್ವದಲ್ಲಿ ಕೊಂಡರಾಜನಹಳ್ಳಿ ಗೇಟ್ ಸಮೀಪ ನಗರದ ಕಡೆಯಿಂದ ಬೆಂಗಳೂರು ಕಡೆ ಹೋಗುತ್ತಿದ್ದ ಬೊಲೆರೊ ಗೂಡ್ಸ್ ವಾಹನ ತಡೆಯಲು ಪ್ರಯತ್ನಿಸಿದಾಗ ಪೊಲೀಸರನ್ನು ನೋಡಿದ ಆರೋಪಿಗಳು ವಾಹನ ಸಮೇತ ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಆಗ ಪೊಲೀಸರು ವಾಹನವನ್ನು ಸುತ್ತುವರಿದು ತಡೆದು ಚಾಲಕ ಮತ್ತು ವಾಹದಲ್ಲಿದ್ದ ನಾಲ್ವರನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ 5 ಹಸುಗಳನ್ನು ಮಾರಿದ್ದಾಗಿ ಬಾಯಿಬಿಟ್ಟಿದ್ದಾರೆ. ಆರೋಪಿಗಳಿಂದ ವಾಹನ ಮತ್ತು 51 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ.
ಶ್ರೀನಿವಾಸಪುರ: ತಾಲೂಕಿನ ರೆಡ್ಡಿಂಪಲ್ಲಿಯ ಗೀತಾ ಎಂಬುವರು ಮೇಕೆ ಮೇಯಿಸುತ್ತಿದ್ದಾಗ ಜೋಡಿಕೊತ್ತಪಲ್ಲಿಯ ಕೆ.ಎನ್.ನಾರಾಯಣಸ್ವಾಮಿ ಎಂಬಾತನಮ್ಮ ಜಮೀನಿನಲ್ಲೇಕೆ ಮೇಕೆ ಮೇಯಿಸುತ್ತಿದ್ದೀಯಾ ಎಂದು ನಿಂದಿಸಿ, ಹಲ್ಲೆ ಮಾಡಿದ್ದಾರೆ.ರೆಡ್ಡಿಂಪಲ್ಲಿಯ ಗೀತಾ ನರೇಶ್ ಅವರು ಬುಧವಾರ ಎಂದಿನಂತೆ ಜೋಡಿಕೊತ್ತಪಲ್ಲಿ ಬಳಿಯ ಬೆಟ್ಟದಲ್ಲಿ ಮೇಕೆ ಮೇಯಿಸಲು ಹೋಗಿದ್ದರು. ಅದೇ ವೇಳೆ ಸ್ಥಳಕ್ಕೆ ಬಂದ ಜೋಡಿಕೊತ್ತಪಲ್ಲಿಯ ನಾರಾಯಣಸ್ವಾಮಿ ಎಂಬುವವರು ಗೀತಾ ಮೇಲೆ ಹಲ್ಲೆ ಮಾಡಿದ್ದಾರೆ. ಸರ್ಕಾರಿ ಜಾಗದಲ್ಲಿ ಮೇಯಿಸಲಾಗುತ್ತಿತ್ತು. ವಿನಾಕಾರಣ ನನ್ನ ಪತ್ನಿಗೆ ಅವಾಚ್ಯ ಪದಗಳಿಂದ ನಿಂದಿನಿ, ಕಲ್ಲು ಮತ್ತು ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ ಎಂದು ಗೀತಾ ಪತಿ ನರೇಶ್ ಶ್ರೀನಿವಾಸಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.