

ರಾಯಚೂರು ನಗರದ ಸೇರಿದಂತೆ ಜಿಲ್ಲಾಧ್ಯಂತ ಖಾಲಿ ಇರುವ ಸ್ಥಳಗಳಿಗೆ ನಕಲಿ ದಾಖಲೆ ಸೃಷ್ಟಿಸಿ, ವಂಚಿಸುತ್ತಿದ್ದ ಪ್ರಮುಖ ಐದು ಜನ ಆರೋಪಿಗಳನ್ನು ಬಂಧಿಸಲಾಗಿದೆಂದು ಎಸ್ಪಿ ಎಂ.ಪುಟ್ಟಮಾದಯ್ಯ ಹೇಳಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಜೂನ್ 26 ರಂದು ನಕಲಿ ದಾಖಲೆ ಸೃಷ್ಠಿಮಾಡಿ ಆಸ್ತಿ ಕಬಳಿಸುತ್ತಿರುವವರ ಕುರಿ ಸಿರವಾರ ಠಾಣೆಯಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ನಂತರ ನಗರದ ಪಶ್ಚಿಮ ಠಾಣೆಯಲ್ಲಿ ಪ್ರತ್ಯೇಕ ನಾಲ್ಕು ಪ್ರಕರಣ ದಾಖಲಾಗಿತ್ತು.
ಕೂಡಲೇ ತನಿಖೆಗಾಗಿ ರಾಯಚೂರು ಉಪ ವಿಭಾಗಾಧಿಕಾರಿ ಶಾಂತವೀರ ನೇತೃತ್ವದಲ್ಲಿ ತಂಡವನ್ನು ರಚಿಸಿ ನಗರದ ಮೊಹಮದ್ ಜಾವೀದ್, ರಾಂಪುರ ನಿವಾಸಿಗಳಾದ ಅಕ್ಷಯ ಕುಮಾರ ಭಂಡಾರಿ, ಉಪೇಂದ್ರ ಕುಮಾರ,ಮುರಾಪುರ ಗ್ರಾಮದ ನೀಲಕಂಠ ಮತ್ತು ಹೊಸಪೇಟೆ ಗ್ರಾಮದ ಆಂಜಿನೇಯ್ಯ ಎಂಬುವವರನ್ನು ಬಂಧಿಸಿ, ವಿಚಾರಣೆ ನಡೆಸಲಾಗಿತ್ತು. ಬಂಧಿತರಿಂದ 20 ಲಕ್ಷ ರೂ.ಮೌಲ್ಯದ ಕಿಯಾ ಕಾರನ್ನು ಜಪ್ತಿ ಮಾಡಿ ಒಟ್ಟು 5 ಜನರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ನಕಲಿ ದಾಖಲೆ ಸೃಷ್ಟಿ ಮಾಡಲು ಕೆಲ ಸರ್ಕಾರಿ ನೌಕರರು ಸಹಕಾರ ನೀಡಿರುವುದರ ಕುರಿತು ಮಾಹಿತಿ ಇದ್ದು, ಶೀಘ್ರದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದರು. ಈ ಸಂದರ್ಭದಲ್ಲಿ ಎ.ಎಸ್ಪಿ ಕುಮಾರಸ್ವಾಮಿ, ಡಿವೈಎಸ್ಪಿ ಶಾಂತವೀರ ಇದ್ದರು.