5 ಮಸೀದಿಗಳಲ್ಲಿ ಗಣೇಶ ಪ್ರತಿಷ್ಠಾಪನೆ

28brg2-Web
ಕುರುಂದವಾಡದ ಬೈರಾಕದಾರ ಮಸೀದಿಯಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ ಹಾಗೂ ಪಂಜಾ.
Published on

ಬೋರಗಾಂವ: ಮಸೀದಿಯಲ್ಲಿ ಗಂಟೆ, ಜಾಗಟೆ ನಿನಾದ, ಹಿಂದು-ಮುಸ್ಲಿಂ ಮಹಿಳೆಯರಿಂದ ಆರತಿ, ಅರ್ಚನೆಗಳ ಕಲರವ, ಯಾವುದೇ ಭೇದ-ಭಾವವಿಲ್ಲದೆ ಹಬ್ಬ ಸಂಭ್ರಮಿಸುವ ಜನರು…

ಇಂಥದ್ದೊಂದು ಅಪರೂಪದ ಆಚರಣೆ ಕಾಣೋದು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕುರುಂದವಾಡ ಪಟ್ಟಣದಲ್ಲಿ. ಮಸೀದಿಗಳಲ್ಲೂ ಗಣೇಶ ಹಬ್ಬ ಆಚರಿಸುವ ಮೂಲಕ ಅಲ್ಲಿನ ಜನರು ಸಾಮರಸ್ಯಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.

ಕೃಷ್ಣಾ-ಪಂಚಗಂಗಾ ನದಿಗಳ ಪವೀತ್ರ ಸಂಗಮದಡಿ ಕುರುಂದವಾಡ ಪಟ್ಟಣವಿದೆ. 154 ವರ್ಷಗಳಿಂದ ಕುರುಂದವಾಡ ಪಟ್ಟಣದ ಐದು ಮಸೀದಿಗಳಲ್ಲಿ ಪ್ರತಿವರ್ಷ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಮಾಳಭಾಗದಲ್ಲಿರುವ ಬೈರಕದಾರ ಮಸೀದಿ, ಕಾರ್ಖಾನಾ ಪೀರ ಮಸೀದಿ, ಡೆಪನ್ಪೂರ ಮಸೀದಿ ಮತ್ತು ಶೆಳಕೆ ಗಲ್ಲಿಯ ಶೆಳಕೆಪೀರ್ ಮಸೀದಿಗಳಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಸದ್ಭಾವನೆ ಮತ್ತು ವಿಜೃಂಭಣೆಯಿಂದ ಉತ್ಸವ ಆಚರಿಸಲಾಗುತ್ತಿದೆ. ಗಣೇಶ ಉತ್ಸವ ಮಂಡಳಗಳಲ್ಲಿ ಹಿಂದು-ಮುಸ್ಲಿಮರು ಸದಸ್ಯರಿರುತ್ತಾರೆ.

ಕೆಲ ಮಂಡಳಗಳಿಗೆ ಮುಸ್ಲಿಂ ಸಮುದಾಯದ ಮುಖಂಡರೇ ಅಧ್ಯಕ್ಷರಾಗಿದ್ದಾರೆ. ಗಣೇಶ ಉತ್ಸವದಲ್ಲಿ ಮುಸ್ಲಿಮರು ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ.

ಮೊಹರಂ ಹಬ್ಬದಲ್ಲೂ ಹಿಂದುಗಳು ಕೂಡ ಅಷ್ಟೇ ಶ್ರದ್ಧೆ-ಭಕ್ತಿಯಿಂದ ಭಾಗವಹಿಸುತ್ತೇವೆ. ಭಿನ್ನತೆ ಮರೆತು ಸಂಭ್ರಮಿಸುತ್ತೇವೆ ಎನ್ನುತ್ತಾರೆ ಕಲ್ಲಪ್ಪ ಕಬ್ಬೂರ.

ಗಣೇಶನಿಗೆ ಹಿಂದು-ಮುಸ್ಲಿಮರು ಒಂದಾಗಿಯೇ ಪೂಜೆ, ಆರತಿ, ನೈವೇದ್ಯ ಸಲ್ಲಿಸುತ್ತಾರೆ. ಮುಸ್ಲಿಂ ಮಹಿಳೆಯರು ಗಣೇಶನ ಆರತಿ ಹಾಡು ಹಾಡುತ್ತಾರೆ. ಅಷ್ಟೇ ಅಲ್ಲ ಪೂಜೆ ಸಂದರ್ಭದಲ್ಲಿ ಗಂಟೆ, ಡೋಲು ಮತ್ತು ತಾಷೆಗಳ ನಿನಾದ ಮೊಳಗುತ್ತದೆ. ಉತ್ಸವ ಸಂದರ್ಭದಲ್ಲಿ ಮಸಿದಿಯಲ್ಲಿಯೇ ಸತ್ಯನಾರಾಯಣ ಪೂಜೆ ಸಲ್ಲಿಸಿ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿರುತ್ತದೆ. ಪ್ರಸಕ್ತ ವರ್ಷ ಮಸೀದಿಯಲ್ಲೇ ಗಣೇಶ ಮೂರ್ತಿ ಹಾಗೂ ಪೀರಪಂಜಾಗಳನ್ನು ಒಟ್ಟಾಗಿಯೇ ಸ್ಥಾಪಿಸಿರುವುದು ಸೌಹಾರ್ದತೆ ಹಾಗೂ ಭ್ರಾತೃತ್ವಕ್ಕೆ ಸಾಕ್ಷಿಯಾಗಿದೆ.

ಮಸೀದಿಯಲ್ಲಿ ಗಣೇಶೋತ್ಸವ ಮೊಹರಂ ಮಾತ್ರವಲ್ಲದೆ ಶಿವ ಜಯಂತಿ ಹಾಗೂ ಹನುಮ ಜಯಂತಿ ಉತ್ಸವ ಕೂಡ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಸತ್ಯನಾರಾಯಣ ಪೂಜೆಗೆ ಮುಸ್ಲಿಂ ಸಮುದಾಯದವರೇ ಮುಖಂಡರಾಗಿರುತ್ತಾರೆ.| ಸಾದಿಕ್ ಉಸ್ಮಾನ್ ದಬಾಸೆ ಕಾರ್ಖಾನಾ ಪೀರ್ ಗಣೇಶ ಉತ್ಸವ ಮಂಡಳ ಅಧ್ಯಕ್ಷ, ಕುರುಂದವಾಡ 154 ವರ್ಷಗಳಿಂದ ನಾವು ಮಸೀದಿಗಳಲ್ಲಿ ಗಣೇಶೋತ್ಸವ ಆಚರಿಸುತ್ತಿದ್ದೇವೆ. ಛತ್ರಪತಿ ಶಿವಾಜಿ ಮಹಾರಾಜರು ನೀಡಿದ ಮಾರ್ಗದಲ್ಲಿ ಹಿಂದು-ಮುಸ್ಲಿಮರು ಸಹೋದರರು ಎಂಬ ಭಾವನೆಯಿಂದ ಪಟ್ಟಣದ ಎಲ್ಲ ಸಮುದಾಯದವರು ಉತ್ಸವದಲ್ಲಿ ಪಾಲ್ಗೊಳ್ಳುವುದು ಎಲ್ಲರಿಗೂ ಹೆಮ್ಮೆ. ಮೂರು-ವರ್ಷಗಳಿಂದ ಮೊಹರಂ ಹಾಗೂ ಗಣೇಶ ಉತ್ಸವ ಹಬ್ಬಗಳು ಒಂದೇ ತಿಂಗಳಲ್ಲಿ ಬರುತ್ತಿರುವುದರಿಂದ ಗಣಪತಿ ಮತ್ತು ತಾಬೂತ್‌ಗಳನ್ನು ಪ್ರತಿಷ್ಠಾಪಿಸಿ ಸಂಭ್ರಮಿಸಲಾಗುತ್ತಿದೆ.| ವಿನೋದ ತನಪುರೆ ಕಾರ್ಯದರ್ಶಿ,ಬೈರಕದಾರ ಮಸೀದಿ

| ಸುಯೋಗ ಕಿಲ್ಲೇದಾರ ಬೋರಗಾಂವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net