ಪತ್ರಿಕಾ ವಿತರಕರ ಸಂಘಕ್ಕೆ 5 ಲಕ್ಷ ರೂ. ನೆರವು

04 GDG-
Published on

ಗದಗ: ಪತ್ರಿಕಾ ವಿತರಕರ ಸಂಘದ ಜಿಲ್ಲಾ ಘಟಕಕ್ಕೆ ಶಾಸಕರ ನಿಧಿಯಿಂದ 5 ಲಕ್ಷ ರೂ. ನೆರವು ನೀಡುವುದಾಗಿ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ ಘೋಷಿಸಿದರು.

ಇಲ್ಲಿನ ಹಳೆಸರಾಫ್ ಬಜಾರ್‌ನಲ್ಲಿರುವ ಅಂಬಾಭವಾನಿ ಕಲ್ಯಾಣ ಮಂಟಪದಲ್ಲಿ ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಹಾಗೂ ಸಂಘದ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಶ್ರಮಜೀವಿಗಳಿಗೆ ಆದಾಯ ಕಡಿಮೆ. ಅಂಥವರಿಗಾಗಿ ಸರ್ಕಾರ ಸಹಾಯ ಮಾಡಿದರೆ ದೇಶವೇ ಹಾಳಾಯಿತು ಎಂದು ಟೀಕಿಸುತ್ತಾರೆ. ದೇಶಕ್ಕೆ ಸ್ವಾತಂತ್ರೃ ದೊರೆತು 75 ವರ್ಷ ಗತಿಸಿದರೂ ಶೇ. 50ರಷ್ಟು ಜನ ಈಗಲೂ ಬಡತನ ರೇಖೆಗಿಂತ ಕೆಳಗಿದ್ದಾರೆ. ಅವರನ್ನು ಮೇಲೆ ತರುವ ಪ್ರಯತ್ನ ಮಾಡಿದರೆ ದೇಶ ದಿವಾಳಿ ಮಾಡಿದರು ಎಂದು ಆರೋಪ ಮಾಡುತ್ತಾರೆ ಎಂದರು.

ಕಾಂಗ್ರೆಸ್ ಬಡವರ ಪರವಾಗಿದೆ. ಪತ್ರಿಕಾ ವಿತರಕರ ಬೇಡಿಕೆಗಳು ನ್ಯಾಯಯುತವಾಗಿವೆ. ಕಟ್ಟಡ ಕಾರ್ಮಿಕರಿಗೆ ಸಿಗುವ ಎಲ್ಲ ಸೌಲಭ್ಯಗಳು ಪತ್ರಿಕಾ ವಿತರಕರಿಗೂ ದೊರೆಯಬೇಕು. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವೆ. ಅಗತ್ಯವೆನಿಸಿದರೆ ಪತ್ರಿಕಾ ವಿತರಕರ ನಿಯೋಗದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸುವೆ ಎಂದು ಭರವಸೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಹೊಸಳ್ಳಿ ಜ. ಅಭಿನವ ಬೂದೀಶ್ವರ ಸ್ವಾಮೀಜಿ ಮಾತನಾಡಿ, ಪತ್ರಿಕಾ ವಿತರಕರು ನಿಜವಾದ ಶ್ರಮಜೀವಿಗಳು. ಬದುಕಿನ ಸುಖ ಬದಿಗೊತ್ತಿ ನಿರಂತರವಾಗಿ ಕಾಯಕದಲ್ಲಿ ನಿರತರಾದವರು. ಕಾಯಕ ಮತ್ತು ದಾಸೋಹ ಎನ್ನುವ ಶರಣರ ಪರಂಪರೆಯಲ್ಲಿ ಸಾಗುತ್ತಿದ್ದಾರೆ. ಪತ್ರಿಕಾ ವಿತರಕರ ವೃತ್ತಿ ಬದುಕು ಮತ್ತಷ್ಟು ಹಸನಾಗಲಿ ಎಂದು ಹಾರೈಸಿದರು.

ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಶಂಕರ ಕುದರಿಮೋತಿ ಮಾತನಾಡಿ, ಮಳೆ- ಬಿಸಿಲು ಎನ್ನದೆ ಪತ್ರಿಕಾ ವಿತರಕರು ಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುತ್ತಿದ್ದಾರೆ. ಅಂಥ ಪತ್ರಿಕಾ ವಿತರಕರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿಸಬೇಕು ಎಂದು ಮನವಿ ಮಾಡಿದರು. ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಮುರುಗೇಶ ಶಿವಪೂಜಿ, ವಾರ್ತಾಧಿಕಾರಿ ವಸಂತ ಮಡ್ಲೂರ, ಕಾರ್ಮಿಕ ಇಲಾಖೆ ಅಧಿಕಾರಿ ಭೀಮರಾವ್ ಜಾಧವ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಾಜು ಹೆಬ್ಬಳ್ಳಿ, ಸಾರ್ವಜನಿಕ ಗಜಾನನೋತ್ಸವ ಮಹಾಮಂಡಳಿ ಅಧ್ಯಕ್ಷ ಕಿಶನ್ ಮೆಹರವಾಡೆ, ಪತ್ರಕರ್ತರಾದ ಮಂಜುನಾಥ ಅಬ್ಬಿಗೇರಿ, ಎನ್.ಆರ್. ಭಾಂಡಗೆ, ಎಸ್.ಎನ್. ಬಳ್ಳಾರಿ ಇದ್ದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವೀರಬಸಯ್ಯ ವಿರಕ್ತಮಠ ಅಧ್ಯಕ್ಷತೆ ವಹಿಸಿದ್ದರು. ಚಂದ್ರಯಾನ- 3 ಯಶಸ್ಸಿಗೆ ಕಾರಣರಾದ ತಂಡದಲ್ಲಿದ್ದ ಗದಗದ ಸುಧೀಂದ್ರ ಬಿಂದಗಿ ಹಾಗೂ ರಾಷ್ಟ್ರಮಟ್ಟದ ಭಾಷಣ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ಪವಿತ್ರಾ , ಸೈಕ್ಲಿಂಗ್ ಸಾಧಕಿ ಪವಿತ್ರಾ ಕುರ್ತಕೋಟಿ, ಕುಸ್ತಿಪಟುಗಳಾಗ ಭುವನೇಶ್ವರಿ ಕೋಳಿವಾಡ, ರಾಧಿಕಾ ತೊಂಡಿಹಾಳ, ಯೋಗ ಸಾಧಕ ಯಶವಂತ ಮತ್ತೂರ, ಖಾಸಗಿ ಬ್ಯಾಂಕ್ ವ್ಯವಸ್ಥಾಪಕ ಮಾರುತಿ ಮುಂಡರಗಿ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net