

ಬೆಂಗಳೂರು: ಇತ್ತೀಚೆಗಿನ ಅತಿವೃಷ್ಟಿಯಲ್ಲಿ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಕಂದಾಯ ಇಲಾಖೆ ಪ್ರಕಟಿಸಿದೆ. ಎನ್ಡಿಆರ್ಎಫ್, ಎಸ್ಡಿಆರ್ಎಫ್ ಮಾರ್ಗಸೂಚಿ ಪ್ರಕಾರ ಪರಿಹಾರ ನೀಡಿದರೆ ಪೂರ್ಣ ಮನೆ ಕಳೆದುಕೊಂಡವರಿಗೆ 1 ಲಕ್ಷ ರೂ. ನೀಡಲು ಸಾಧ್ಯವಿಲ್ಲ. ಈ ಕಾರಣಕ್ಕೆ ರಾಜ್ಯ ಸರ್ಕಾರ ಹೆಚ್ಚುವರಿ ಪರಿಹಾರ ಘೋಷಿಸಿದೆ.
2020 ಆಗಸ್ಟ್ನಿಂದ ಸೆಪ್ಟೆಂಬರ್ವರೆಗೆ ಪ್ರವಾಹದಿಂದ ಬಾಧಿತವಾದ ಸಮಸ್ಯಾತ್ಮಕ ಗ್ರಾಮಗಳ ಸಂತ್ರಸ್ಥರ ಬಟ್ಟೆ-ಬರೆ ಹಾಗೂ ದಿನಬಳಕೆ ವಸ್ತುಗಳಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ, ಪ್ರತಿ ಕುಟುಂಬಕ್ಕೆ 3,800 ರೂ. ಜತೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರದಿಂದ 6,200 ರೂ. ಸೇರಿಸಿ 10 ಸಾವಿರ ರೂ. ನೀಡಲು ನಿರ್ಧರಿಸಲಾಗಿದೆ. ಹಾಗೆಯೇ ಪ್ರವಾಹದಿಂದ ಸಂಪೂರ್ಣ ಅಥವಾ ತೀವ್ರ ಹಾನಿಗೊಳಗಾದ ಮನೆಗಳ ಮರುನಿರ್ವಣ/ದುರಸ್ತಿಗಾಗಿ ಹೆಚ್ಚುವರಿ ಪರಿಹಾರ ನೀಡುವ ಸಂಬಂಧ ‘ಸೇರ್ಪಡೆ ಆದೇಶ’ ಪ್ರಕಟಿಸಿದೆ.
ಪೂರ್ಣ ಅಥವಾ ಶೇ.75ಕ್ಕಿಂತ ಹೆಚ್ಚು ಹಾನಿಯಾದ ಮನೆಗೆ 5 ಲಕ್ಷ ರೂ., ಶೇ.25ರಿಂದ ಶೇ.75 ಹಾನಿಯ ಮನೆ ಕೆಡವಿ ಹೊಸದಾಗಿ ನಿರ್ವಿುಸಲೂ 5 ಲಕ್ಷ ರೂ., ಶೇ.25ರಿಂದ ಶೇ.75 ವರೆಗಿನ ಹಾನಿಗೆ 3 ಲಕ್ಷ ರೂ., ಶೇ.15ರಿಂದ ಶೇ.25 ಹಾನಿಗೆ 50 ಸಾವಿರ ರೂ. ನೀಡಲಾಗುತ್ತದೆ. ಪ್ರಸ್ತುತ ರಾಜ್ಯದಲ್ಲಿ ಅತಿವೃಷ್ಟಿ, ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದು, ಅಕ್ಟೋಬರ್ನಲ್ಲೂ ನೆರೆ ಹಾವಳಿಯಿಂದ ಹಾನಿಗೀಡಾದ ಮನೆಗಳ ಮರುನಿರ್ವಣ ಅಥವಾ ದುರಸ್ತಿ ಕಾರ್ಯ, ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ಥರ ಪರಿಹಾರ ಕಾರ್ಯಗಳಿಗೆ ಆಗಸ್ಟ್ನಲ್ಲಿ ಹೊರಡಿಸಿದ ಆದೇಶವನ್ನು ಮುಂದುವರಿಸಲು ಸರ್ಕಾರ ಮಂಜೂರಾತಿ ನೀಡಿದೆ.