

ಹುಬ್ಬಳ್ಳಿ: ಸಹಜ ಸಮೃದ್ಧ ಸಂಸ್ಥೆ ವತಿಯಿಂದ ಇಲ್ಲಿನ ಡಾ. ಮೂಜಗಂ ಸಭಾಭವನದಲ್ಲಿ ಆಯೋಜಿಸಿದ್ದ ಎರಡು ದಿನಗಳ ಸೊಪ್ಪು ಮೇಳವು ನಗರದ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.
ಮೇಳದ ಎರಡನೇ ದಿನವಾದ ಭಾನುವಾರ ಆಗಮಿಸಿದ ಜನರು ಈವರೆಗೂ ನೋಡದ ಬಗೆಬಗೆಯ ಸೊಪ್ಪು ಕಂಡು, ಅವುಗಳನ್ನು ಕೊಂಡು ಸಂಭ್ರಮಿಸಿದರು. ಕುಂದಗೋಳ, ಗೋಕರ್ಣ, ಹೆಗ್ಗಡದೇವನಕೋಟೆಯಿಂದ ಬಂದಿದ್ದ ಸೊಪ್ಪು ಬೆಳೆಗಾರರು ತಾವು ತಂದಿದ್ದ ತರಹೇವಾರಿ ಸೊಪ್ಪುಗಳು ಮಾರಾಟವಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.
ಎರಡು ದಿನಗಳ ಮೇಳದಲ್ಲಿ ಐದು ಲಕ್ಷ ರೂಪಾಯಿಗಳ ವಹಿವಾಟು ನಡೆಯಿತು. ಬೆಳಗಿನಿಂದಲೇ ದಂಡು ಗಟ್ಟಿ ಬರುತ್ತಿದ್ದ ಗ್ರಾಹಕರನ್ನು ಕಂಡು, ಮಳಿಗೆದಾರರು ಖುಷಿಯಿಂದ ಬೀಗಿದರು.
ಸೊಪ್ಪು ಮೇಳ ಅಂಗವಾಗಿ ರೋಟರಿ ಕ್ಲಬ್ ಆಶ್ರಯದಲ್ಲಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಒಟ್ಟು 25 ಮಕ್ಕಳು ಭಾಗವಹಿಸಿದ್ದರು. ತಾವು ಕಂಡ ಸೊಪ್ಪಿನ ಕೃಷಿ, ಮಾರುಕಟ್ಟೆ ಮತ್ತು ಅಡುಗೆಯ ಲೋಕವನ್ನು ಚಿಣ್ಣರು ಬಣ್ಣಗಳ ಮೂಲಕ ತೆರೆದಿಟ್ಟರು.
ಮಕ್ಕಳ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಹುಬ್ಬಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಬಾಪುಗೌಡ ಬಿರಾದಾರ, ಸೊಪ್ಪಿನಿಂದ ಅಗತ್ಯ ಪೌಷ್ಟಿಕಾಂಶ ದೊರೆಯುತ್ತವೆ. ಇಂಥ ಮೇಳಗಳನ್ನು ಆಯೋಜಿಸುವ ಮೂಲಕ, ಗ್ರಾಹಕರಲ್ಲಿ ಶುದ್ಧ ಆಹಾರದ ಕುರಿತ ಜಾಗೃತಿ ಮೂಡಿಸಿರುವುದು ಮಾದರಿಯಾಗಿದೆ ಎಂದರು.
ಆಯುರ್ವೇದ ತಜ್ಞೆ ಡಾ. ಅನಿತಾ ಕೆಂಭಾವಿ ಮಾತನಾಡಿ, ನಿತ್ಯದ ಆಹಾರದಲ್ಲಿ ಪೋಷಕಾಂಶಯುಕ್ತ ಸೊಪ್ಪುಗಳನ್ನು ಬಳಸುವ ಪರಿಪಾಠ ಕಡಿಮೆಯಾಗುತ್ತಿದೆ. ಶರೀರವು ಸದೃಢವಾಗಿರಬೇಕಾದರೆ ಸೊಪ್ಪುಗಳ ಸೇವನೆ ಅಗತ್ಯ ಎಂದು ಸಲಹೆ ನೀಡಿದರು.
‘ಅಜ್ಜಿಯ ಮಡಿಲು ಸೊಪ್ಪಿನ ಕಡಲು’ ಕಾರ್ಯಕ್ರಮದ ಮೂಲಕ ರಾಜ್ಯಾದ್ಯಂತ ಅರಿವು ಮೂಡಿಸುತ್ತಿರುವ ಶಿವಮೊಗ್ಗದ ಮುರಳೀಧರ ಗುಂಗುರಮಳೆ ಅವರು, ಮಕ್ಕಳು ಮತ್ತು ಪೋಷಕರಿಗೆ ಸೊಪ್ಪುಗಳ ಮಹತ್ವ ತಿಳಿಸಿಕೊಟ್ಟರು.
ಸಹಜ ಸಮೃದ್ಧ ನಿರ್ದೇಶಕ ಜಿ. ಕೃಷ್ಣ ಪ್ರಸಾದ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮೇಳದ ಸಂಚಾಲಕ ಶಾಂತಕುಮಾರ .ಸಿ. ನಿರೂಪಿಸಿದರು. ಹುಬ್ಬಳ್ಳಿ ರೋಟರಿ ಕ್ಲಬ್ ಕಾರ್ಯದರ್ಶಿ ಎ.ವಿ. ಸಂಕನೂರ ಉಪಸ್ಥಿತರಿದ್ದರು.
ಚಿತ್ರಕಲಾ ಸ್ಪರ್ಧೆ ವಿಜೇತರು: ಸೊಪ್ಪಿನ ಚಿತ್ರಕಲಾ ಸ್ಪರ್ಧೆಯ 1 ರಿಂದ 4ನೇ ತರಗತಿ ಒಳಗಿನ ಮಕ್ಕಳ ವಿಭಾಗದಲ್ಲಿ ಪ್ರಿಯಲ್ ಕಬಾಡೆ (ಪ್ರಥಮ), ಕುಮುದಾ ಟಿ. ಬಸವ (ದ್ವಿತೀಯ), ನಿಹಾರಿಕಾ ವಿ. ಮುರುಗೋಟ (ತೃತೀಯ) ಹಾಗೂ ನಿಕಿತಾ (ಪ್ರೋತ್ಸಾಹಕರ) ಬಹುಮಾನ ಪಡೆದರು. 5ರಿಂದ 7ನೇ ತರಗತಿ ಒಳಗಿನ ಮಕ್ಕಳ ವಿಭಾಗದಲ್ಲಿ ಭುವನ ಟಿ. (ಪ್ರಥಮ), ಸಾನ್ವಿ ಯರಗುಪ್ಪ (ದ್ವಿತೀಯ), ಸಂಜನಾ ಪಾಟೀಲ (ತೃತೀಯ) ಪಹುಮಾನ ಪಡೆದರೆ ಶಿವು ಪ್ರದೀಪ, ಕನಿಕಾ ಕೆ. ಹಾಗೂ ನಿಕಿತಾ ಪ್ರೋತ್ಸಾಹಕರ ಬಹುಮಾನ ಗಳಿಸಿದರು. ಚಿತ್ರಕಲಾ ಶಿಕ್ಷಕರಾದ ರತ್ನ ಮುರಶಿಳ್ಳಿ ಹಾಗೂ ಶಿಲ್ಪಕಲಾ ಬಂಕಾಪುರ ತೀರ್ಪುಗಾರರಾಗಿದ್ದರು.