

ಬೆಳಗಾವಿ: ಆರ್ಥಿಕ ತೊಂದರೆಯಲ್ಲಿರುವ ಪ್ರತಿ ವಕೀಲರಿಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಷ ರೂ.ಸಾಲ ನೀಡಬೇಕು. ಅಲ್ಲದೆ, 2022ರ ನಂತರ ಮಾಸಿಕ ಕಂತುಗಳೊಂದಿಗೆ 10 ವರ್ಷಗಳ ಅವಧಿಗೆ ಈ ಸಾಲ ಮರುಪಾವತಿಸಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲು ಜಿಲ್ಲಾ ವಕೀಲರ ಸಂಘದ ಸಭೆಯಲ್ಲಿ ನಿರ್ಧರಿಸಲಾಯಿತು.
ನಗರದ ನ್ಯಾಯಾಲಯ ಸಂಕೀರ್ಣದಲ್ಲಿನ ಸಮುದಾಯ ಭವನದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಸದಸ್ಯರು, ಕರೊನಾ ತುರ್ತು ಪರಿಸ್ಥಿತಿಯಲ್ಲಿ ನ್ಯಾಯಾಲಯಗಳಲ್ಲಿ ಪೂರ್ಣ ಪ್ರಮಾಣದ ಕಲಾಪ ನಡೆಯದ ಕಾರಣ ನೂರಾರು ವಕೀಲರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಎಲ್ಲರಿಗೂ ಆಸರೆಯಾಗುವ ನಿಟ್ಟಿನಲ್ಲಿ ರಾಜ್ಯ ವಕೀಲರ ಕಲ್ಯಾಣ ನಿಧಿಯಿಂದ ತಲಾ ಒಂದು ಲಕ್ಷ ರೂ. ವಿತರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲು ಸೂಚಿಸಿದರು.ಕಡಿಮೆ ಕಲಾಪ ನಡೆಯುತ್ತಿರುವುದರಿಂದ ವಕೀಲರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು ಹಾಗೂ ವ್ಯಾಪಾರಿಗಳು ಸೇರಿದಂತೆ ಇತರ ವರ್ಗಗಳಿಗೆ ಸರ್ಕಾರ ಸಾಲ ನೀಡುವುದಲ್ಲದೆ, ಅನೇಕ ಬಾರಿ ಆ ಸಾಲವನ್ನೂ ಸಹ ಮನ್ನಾ ಮಾಡಲಾಗಿದೆ. ಆದರೆ, ಕಾನೂನು ಸೇವೆಯಲ್ಲಿರುವ ವಕೀಲರಿಗೆ ನಿವೃತ್ತಿಯ ನಂತರ ಪಾವತಿಸಬೇಕಾದ ಕಲ್ಯಾಣ ನಿಧಿ ಹೊರತುಪಡಿಸಿ, ಇನ್ನಾವುದೇ ಆರ್ಥಿಕ ಭದ್ರತೆ ಇಲ್ಲ ಎಂದು ಸದಸ್ಯರು ಬೇಸರ ವ್ಯಕ್ತಪಡಿಸಿದರು.
ಸಭೆ ನಂತರ ನಿವೃತ್ತ ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಹಾಗೂ ಪಿಡಬ್ಲುೃಡಿಯ ನಿವೃತ್ತ ಅಭಿಯಂತ ವಿ.ಆರ್. ಮುನವಳ್ಳಿ ಅವರನ್ನು ವಕೀಲರ ಸಂಘದಿಂದ ಸನ್ಮಾನಿಸಲಾಯಿತು.
ಅಧ್ಯಕ್ಷ ಎ.ಜಿ. ಮುಳವಾಡಮಠ, ಉಪಾಧ್ಯಕ್ಷ ಸಿ.ಟಿ. ಮಜ್ಜಗಿ, ಕಾರ್ಯದರ್ಶಿ ಆರ್.ಸಿ. ಪಾಟೀಲ, ಜಂಟಿ ಕಾರ್ಯದರ್ಶಿ ಶಿವಪುತ್ರಪ್ಪ ಪಟ್ಕಲ, ಹಿರಿಯ ವಕೀಲ ಎಂ.ಬಿ. ಜಿರಲಿ, ಸಚಿನ ಶಿವಣ್ಣವರ ಹಾಗೂ ಕಲ್ಮೇಶ ಮಾಯನ್ನಾಚೆ ಇತರರು ಇದ್ದರು.