ಅನ್ನಭಾಗ್ಯ ಯೋಜನೆ ಅಡಿ ಹಣದ ಬದಲು 5 ಕೆಜಿ ಅಕ್ಕಿ

minister k.h.muniyappa
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ
Published on

ಶಿವಮೊಗ್ಗ: ಅನ್ನಭಾಗ್ಯ ಯೋಜನೆ ಅಡಿ ಇನ್ಮುಂದೆ ಹಣದ ಬದಲಾಗಿ ಸಿಗಲಿದೆ 5 ಕೆಜಿ ಅಕ್ಕಿ ನೀಡಲಾಗುವುದು. ಫೆಬ್ರವರಿ ತಿಂಗಳಿನ ಅಕ್ಕಿ ಸೇರಿದಂತೆ ಮಾರ್ಚ್ ತಿಂಗಳಲ್ಲಿ ತಲಾ 10 ಕೆಜಿ ಅಕ್ಕಿ ನೀಡಲು ನಿರ್ಧಾರ ಮಾಡಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಐದು ಕೆಜಿ ಅಕ್ಕಿಯನ್ನು ಕೊಡುತ್ತೇವೆಂದು ಪ್ರಣಾಳಿಕೆಯಲ್ಲಿ ಹೇಳಿದ್ದೆವು. ಈಗ ಅದನ್ನ ಜಾರಿಗೊಳಿಸುತ್ತಿದ್ದೇವೆ. ನಾವಿಂದು ನುಡಿದಂತೆ ನಡೆದಿದ್ದೇವೆ. ಈ ಹಿಂದೆ ಕೇಂದ್ರ ಸರ್ಕಾರಕ್ಕೆ ಅಕ್ಕಿ ಕೇಳಿದಾಗ ಕೊಟ್ಟಿರಲಿಲ್ಲ. ಈಗ ಕೊಡುತ್ತೇವೆಂದು ಹೇಳುತ್ತಿದ್ದಾರೆ. ಹಾಗಾಗಿ ಫೆಬ್ರವರಿ ತಿಂಗಳಿನಿಂದಲೇ ಪ್ರತಿ ತಿಂಗಳು ಕೊಡಲು ನಿರ್ಧಾರ ಮಾಡಿದ್ದೇವೆ ಎಂದರು.

ಐದು ಕೆಜಿ ಅಕ್ಕಿ ನೀಡುವುದರಿಂದ ಪ್ರತಿ ತಿಂಗಳು 2.10 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕಾಗಲಿದೆ. ಈಗಾಗಲೇ ಹಣವನ್ನು ಎಫ್‌ಸಿಐ(ಭಾರತೀಯ ಆಹಾರ ನಿಗಮ)ಗೆ ಪಾವತಿ ಮಾಡಿದ್ದೇವೆ. ಈ ನಿರ್ಧಾರ ತೆಗೆದುಕೊಳ್ಳಲು ಸ್ವಲ್ಪ ತಡವಾಯಿತು. ಹಾಗಾಗಿ ಫೆಬ್ರವರಿ ತಿಂಗಳದ್ದು ಅಕ್ಕಿಯನ್ನು ಸೇರಿಸಿಕೊಡಲಾಗುವುದು. ತಕ್ಷಣ ಕೇಂದ್ರದಿಂದ ಅಕ್ಕಿ ಖರೀದಿ ಮಾಡಿ ನೀಡಲಿದ್ದೇವೆ ಎಂದರು.

ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಂತೆ ಚಾಚು ತಪ್ಪದೇ ಪಾಲನೆ ಮಾಡುತ್ತಿದ್ದೇವೆ. ಜವಾಬ್ದಾರಿ ಏನು ಅಂದರೆ ನ್ಯಾಷನಲ್ ಫುಡ್ ಸೆಕ್ಯೂರಿಟಿ ಆಕ್ಟ್ ಅನ್ನು ನಾವು ತಂದಿದ್ದೇವೆ. ಯಾವ ಬಡವನು ಕೂಡ ಹಸುವಿನಿಂದ ಮಲಗಬಾರದೆಂದು ಈ ನಿರ್ಧಾರ ಮಾಡಿದ್ದೇವೆ ಎಂದು ಹೇಳಿದರು.

2.95 ಲಕ್ಷ ಕಾರ್ಡ್‌ಗಳ ಪರಿಷ್ಕರಣೆ

ಬಿಪಿಎಲ್ ಕಾರ್ಡ್ ವಿತರಣೆ ವಿಳಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವರು, ಕಳೆದ ಸರ್ಕಾರ ಇದ್ದಾಗ 2.95 ಲಕ್ಷ ಕಾರ್ಡ್‌ಗಳು ಪರಿಷ್ಕರಣೆಯಲ್ಲಿದ್ದವು. ನಾವು ಅಧಿಕಾರಕ್ಕೆ ಬಂದ ಮೇಲೆ ಅಧಿಕಾರಿಗಳಿಗೆ ಅದನ್ನು ಪರಿಷ್ಕರಣೆ ಮಾಡಲು ತಿಳಿಸಿದ್ದೆ. ಅದರಲ್ಲಿ 1.65 ಲಕ್ಷ ಕಾರ್ಡ್‌ಗಳನ್ನು ಬಿಪಿಎಲ್ಗೆ ಹಾಗೂ ಉಳಿದ ಕಾರ್ಡ್‌ಗಳನ್ನು ಎಪಿಎಲ್ಗೆ ಸೇರಿಸಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net