

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಅವಳಿನಗರದಲ್ಲಿ ಕಳೆದ ಎಂಟ್ಹತ್ತು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, 10ದಿನಕ್ಕೆ ಬರುವ ಜೀವಜಲ ಸಮರ್ಪಕವಾಗಿ ಸಿಗದೇ ಸಾರ್ವಜನಿಕರು ರೋಸಿ ಹೋಗಿದ್ದಾರೆ. ಹಾಗಾಗಿ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಇನ್ನು ಮುಂದೆ ಐದು ದಿನಕ್ಕೊಮ್ಮೆ ಕಡ್ಡಾಯವಾಗಿ ಪೂರೈಕೆ ಮಾಡಬೇಕು ಎಂದು ಮೇಯರ್ ಈರೇಶ ಅಂಚಟಗೇರಿ ಆದೇಶಿಸಿದರು.
ಅವಳಿನಗರದ ಕುಡಿಯುವ ನೀರಿನ ಸಮಸ್ಯೆ ಕುರಿತು ಚಚಿರ್ಸಿ ನಿರ್ಣಯ ಕೈಗೊಳ್ಳಲು ಇಲ್ಲಿಯ ಮಹಾನಗರ ಪಾಲಿಕೆ ಸಭಾಭವನದಲ್ಲಿ ಬುಧವಾರ ಆಯೋಜಿಸಲಾಗಿದ್ದ ವಿಶೇಷ ಸಾಮಾನ್ಯ ಸಭೆಯಲ್ಲಿ ನಾಲ್ಕು ತಾಸಿನವರೆಗೆ ಚರ್ಚೆ ನಡೆಸಿದ ನಂತರ ಈ ಆದೇಶ ಮಾಡಿದರು.
ಆರಂಭದಲ್ಲಿ ಸಭಾನಾಯಕ ತಿಪ್ಪಣ್ಣ ಮಜ್ಜಗಿ ಮಾತನಾಡಿ, ಎಲ್ ಆ್ಯಂಡ್ ಟಿ ಕಂಪನಿಯವರು ನೀರು ಪೂರೈಕೆ ಜವಾಬ್ದಾರಿ ತೆಗೆದುಕೊಂಡ ನಂತರ ಈ ಸಮಸ್ಯೆ ಎದುರಾಗಿದೆ. ಮೊದಲೆಲ್ಲ ನಾಲ್ಕು ದಿನಕ್ಕೆ ನೀರು ಸಿಗುತ್ತಿತ್ತು. ಸಮರ್ಪಕ ನೀರು ಇದ್ದರೂ ಸರಿಯಾಗಿ ವಿತರಣೆಯಾಗುತ್ತಿಲ್ಲ. ಇದರಿಂದ ಪಾಲಿಕೆ ಸದಸ್ಯರು ಜನರ ಕಡೆ ಬೈಗುಳ ತಿನ್ನಬೇಕಾಗಿದೆ. ಭರವಸೆ ಕೊಟ್ಟು ಬಂದ ಸದಸ್ಯರು ಮುಖ ತೋರಿಸದಂತ ಸ್ಥಿತಿ ಬಂದಿದೆ. ಸರಿಯಾಗಿ ಕೆಲಸ ಮಾಡಲು ಆಗದೇ ಕಂಪನಿಯವರು ಜನರ ಮೇಲೆ ಹೆಚ್ಚಿನ ಹೊರೆ ಹಾಕುತ್ತಿದ್ದಾರೆ ಎಂದು ಹೇಳಿದರು.
ಮಲಪ್ರಭಾ ನದಿಯಿಂದ ನಿತ್ಯ 220 ದಶಲಕ್ಷ ಲೀಟರ್ ನೀರು ಅವಳಿನಗರಕ್ಕೆ ಬರುತ್ತದೆ. ಇದನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ನಾಲ್ಕು ದಿನಕ್ಕೊಮ್ಮೆ ಕೊಡಬಹುದು.
ಎಲ್ ಆ್ಯಂಡ್ ಟಿ ಕಂಪನಿಗೆ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ನಿರ್ವಹಣೆ ಹೊಣೆಯನ್ನು ಮಹಾನಗರ ಪಾಲಿಕೆ ವಾಪಸ್ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ನ ಅನೇಕ ಸದಸ್ಯರು ಆಗ್ರಹಿಸಿದರು.
ಆದರೆ, ಈಗಾಗಲೇ ನೀರು ಪೂರೈಕೆ ಯೋಜನೆಯ ಜವಾಬ್ದಾರಿಯನ್ನು ಸರ್ಕಾರದ ಹಂತದಲ್ಲಿ ಕಂಪನಿಗೆ ಹಸ್ತಾಂತರ ಮಾಡಿ ಆಗಿದೆ. ಈ ಸಂದರ್ಭದಲ್ಲಿ ವಾಪಸ್ ಪಡೆಯುವುದು ನಮ್ಮ ವ್ಯಾಪ್ತಿಯಲ್ಲಿ ಇಲ್ಲ. ಆದರೆ, ಇದರಲ್ಲಿ ಸುಧಾರಣೆ ತರುವ ಬಗ್ಗೆ ಸೂಚನೆ ನೀಡಲಾಗಿದೆ ಎಂದು ಮೇಯರ್ ಹೇಳಿದರು.
25 ಸಾವಿರ ರೂ. ದಂಡ:
ಹುಬ್ಬಳ್ಳಿ ಧಾರವಾಡ ಮಧ್ಯದ ನವನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳು, ಬಡಾವಣೆಗಳಿಗೆ ಏಳೆಂಟು ದಿನಕ್ಕೆ ನೀರು ಸಿಗುತ್ತಿದೆ. ಇದಕ್ಕೆ ಕಾರಣ ಎಲ್ ಆ್ಯಂಡ್ ಟಿ ಕಂಪನಿಯವರು ಹೊಸ ಪೈಪ್ಲೈನ್ ಅಳವಡಿಕೆ ವಿಳಂಬ ಮಾಡಿದ್ದಾರೆ. ನೀರು ಸಂಗ್ರಹಕ್ಕೆ ಟ್ಯಾಂಕ್ ನಿರ್ಮಾಣ ಮಾಡಿಲ್ಲ ಎಂದು ಸದಸ್ಯರಾದ ಚಂದ್ರಶೇಖರ ಮನಗುಂಡಿ, ಸುನಿತಾ ಮಾಳವದಕರ, ಮಂಜುನಾಥ ಇತರರು ದೂರಿದರು. ಇದಕ್ಕೆ ಸೂಕ್ತ ಪರಿಹಾರ ಒದಗಿಸಬೇಕೆಂದೂ ಆಗ್ರಹಿಸಿದರು.
ಮೂರು ಇಲಾಖೆ ನಿರ್ವಹಣೆ:
ಸದ್ಯ ಅವಳಿನಗರ ನೀರು ಪೂರೈಕೆ ವ್ಯವಸ್ಥೆಯನ್ನು ಮೂರು ಇಲಾಖೆಗಳು ನೋಡಿಕೊಳ್ಳುತ್ತಿವೆ. ಎಲ್ ಆ್ಯಂಡ್ ಟಿ ಕಂಪನಿಯವರು ನಿರಂತರ ನೀರು ಯೋಜನೆಯ ಡೆಮೊ ವಲಯ ಹಾಗೂ ಇತರ ವಾರ್ಡ್ ಸೇರಿ ಒಟ್ಟು 36 ವಾರ್ಡ್ಗಳಲ್ಲಿ ಮಾತ್ರ ನಿರ್ವಹಣೆ ಮಾಡುತ್ತಿದ್ದಾರೆ. ಉಳಿದ ವಾರ್ಡ್ಗಳನ್ನು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಣಕಾಸು ನಿಗಮ (ಕೆಯುಐಡಿಎ್ಸಿ) ಹಾಗೂ ಜಲಮಂಡಳಿಯವರು ನೋಡಿಕೊಳ್ಳುತ್ತಿದ್ದಾರೆ.
ಎಲ್ ಆ್ಯಂಡ್ ಟಿ ಕಂಪನಿಯವರು ಅವಳಿನಗರ ಸಂರ್ಪೂಣ ನೀರು ಪೂರೈಕೆ ವ್ಯವಸ್ಥೆ ತಮ್ಮ ವ್ಯಾಪ್ತಿಗೆ ತೆಗೆದುಕೊಳ್ಳಲು ಕೆಲವು ತಾಂತ್ರಿಕ ಸಮಸ್ಯೆಗಳು ಎದುರಾಗಿವೆ. ನೀರು ಪೂರೈಕೆ ನಿರ್ವಹಣೆ ಎಲ್ ಆ್ಯಂಡ್ ಟಿ ಕಂಪನಿಗೆ ಹಸ್ತಾಂತರವಾದ ನಂತರ ಈ ಮೊದಲು ಜಲಮಂಡಳಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯು ಕಂಪನಿಗೆ ಬಂದು ವರದಿ ಮಾಡಿಕೊಳ್ಳಲು ಸೂಚಿಸಲಾಗಿತ್ತು. ಆದರೆ, ಸಿಬ್ಬಂದಿ ಇದುವರೆಗೂ ವರದಿ ಮಾಡಿಕೊಂಡಿಲ್ಲ. ಹಾಗಾಗಿ ಈ ವಾರ್ಡ್ಗಳ ನಿರ್ವಹಣೆಯನ್ನು ಕಂಪನಿಯು ಮಾಡುತ್ತಿಲ್ಲ ಎಂದು ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಅವರು ಸಭೆಗೆ ಮಾಹಿತಿ ನೀಡಿದರು.