ಜನಾಂಗದ ಮೂಲತ್ವ ಉಳಿಸುವ ಪ್ರಯತ್ನ: ಹಸೆಮಣೆ ಏರಿದ ಜೋಡಿ

marriage
ಸಾಮೂಹಿಕ ವಿವಾಹದ ಐದು ಜೋಡಿಗಳು
Published on

ನಿಶಾಂತ್ ಕಿಲೆಂಜೂರು ಕಿನ್ನಿಗೋಳಿ

ಅತಿ ವಿರಳವಾದ ಮೂಲ ಸಂಪ್ರದಾಯದ ಪ್ರಕಾರ ಕೊರಗ ಸಮುದಾಯದ ಐದು ಜೋಡಿಗಳು ಸಾಮೂಹಿಕ ವಿವಾಹದ ಮೂಲಕ ಭಾನುವಾರ ಹಸೆಮಣೆ ಏರಿದರು.

ಸುರತ್ಕಲ್ ಸಮೀಪದ ಕುತ್ತೆತ್ತೂರು ಆದಿವಾಸಿ ಸಮುದಾಯ ಭವನದಲ್ಲಿ ದ.ಕ.ಜಿಲ್ಲಾ ಕೊರಗ ಸಂಘದ ವತಿಯಿಂದ ಸಮಾರಂಭ ನಡೆಯಿತು. ಸಮುದಾಯದ ಹಿಂದಿನ ಸಂಪ್ರದಾಯಗಳು ಮರೆಯಾಗುತ್ತಿರುವ ಕಾಲಘಟ್ಟದಲ್ಲಿ ಹಿರಿಯರು ಮೂಲ ಸಂಸ್ಕೃತಿ ಉಳಿಸಲು ಮುಂದಾಗಿದ್ದಾರೆ.

ಮೆಹಂದಿ ಕಾರ್ಯಕ್ರಮವೇ ಇಲ್ಲ

ಮೂಲ ಸಂಪ್ರದಾಯದ ಪ್ರಕಾರ ಕೊರಗ ಸಮುದಾಯದಲ್ಲಿ ಮೆಹಂದಿ ಕಾರ್ಯಕ್ರಮವೇ ಇಲ್ಲ, ಬದಲು ಮುಹೂರ್ತ ನಡೆಯುತ್ತದೆ. ಮುಹೂರ್ತ ಎಂದರೆ ಮದುವೆಯ ಮುನ್ನಾ ದಿನ ಅರಸಿನ ಮತ್ತು ಹಾಲಿನಿಂದ ಸ್ಥಾನ ಮಾಡಿಸುವುದು. ಬಂದ ಎಲ್ಲರೂ ವಧು -ವರರಿಗೆ ಮುಹೂರ್ತದ ಮಣಿಸರ ಕಟ್ಟುತ್ತಾರೆ. ಎಲ್ಲರೂ ಹಾಕಿದ ನಂತರ ಸಮುದಾಯದ ಗುರಿಕಾರರು ಮಣಿಸರ ಕಟ್ಟುತ್ತಾರೆ. ನಂತರ ಗುರಿಕಾರ ಕಟ್ಟಿದ ಮಣಿಸರ ಬಿಟ್ಟು ಉಳಿದೆಲ್ಲವನ್ನು ತೆಗೆಯಲಾಗುತ್ತದೆ. ಗುರಿಕಾರ ಕಟ್ಟಿದ ಮಣಿಸರ ಮದುವೆ ಆಗುವ ತನಕ ಕುತ್ತಿಗೆಯಲ್ಲಿ ಇರಬೇಕು. ಮದುವೆಯ ದಿನ ತಮ್ಮದೇ ಶೈಲಿಯಲ್ಲಿ ದಿಬ್ಬಣ ಬರ ಮಾಡಿಕೊಳ್ಳುವ ಕ್ರಮ, ಹೂ ಮತ್ತು ಸೀರೆ ಕೊಡುವ ಕ್ರಮ ನಡೆಯುತ್ತದೆ. ಬೇರೆ ಸಮುದಾಯದಲ್ಲಿ ಕಲಶ ಇಟ್ಟು ಧಾರೆ ಎರೆದು ಕೊಡುವ ಕ್ರಮ ಇದ್ದರೆ, ಇಲ್ಲಿ ಧಾರೆ ಎರೆಯುವ ಕ್ರಮ ಚಾಲ್ತಿಯಲ್ಲಿದೆ. ಮೊದಲು ಹುಡುಗಿ ಕಡೆಯಿಂದ ಧಾರೆ ಎರೆದರೆ ಮತ್ತೊಮ್ಮೆ ಹುಡುಗನ ಕಡೆಯಿಂದ ಧಾರೆ ಎರೆಯಲಾಗುತದೆ. ಮದುವೆ ಕ್ರಮ ಆಗುವಾಗ ಎರಡು ಮೂರು ಜನ ಹಿರಿಯ ಮಹಿಳೆಯರು ಸೇರಿ ಪಾರ್ದನ ಶೈಲಿಯಲ್ಲಿ ಹಾಡುತ್ತಾರೆ, ಇದರಲ್ಲಿ ಮದುವೆಯ ನಿಜವಾದ ಅರ್ಥ, ಮದುವೆಯ ನಂತರದ ತಮ್ಮ ಜೀವನಶೈಲಿ, ಗಂಡನ ಮನೆಯಲ್ಲಿ ಹೇಗಿರಬೇಕು ಎಂದು ವಿವರಿಸಲಾಗುತ್ತದೆ. ಮದುವೆ ಮಂಟಪದಲ್ಲಿ ಕಳಸೆಯನ್ನು ಹಿರಿಯರು ಮಣೆಯ ಮೇಲಿಟ್ಟು, ಅಕ್ಕಿ ಸುರಿಯುತ್ತಾರೆ. ಅದರ ಮೇಲೊಂದು ಕೇಪಳ ಹೂ ಇಡಲಾಗುತ್ತದೆ, ಕುಟುಂಬಸ್ಥರು ಮದುಮಕ್ಕಳಿಗೆ ಸೇಸೆ ಹಾಕುತ್ತಾರೆ. ಮತ್ತೊಂದು ಕಡೆ ಡೋಲು ವಾದನ. ಸಾಮೂಹಿಕ ವಿವಾಹದಲ್ಲಿ ಐದು ಜೋಡಿಗಳು ಸಾಂಸಾರಿಕ ಜೀವನಕ್ಕೆ ಕಾಲಿರಿಸಿದ್ದಾರೆ.

ಜಿಲ್ಲಾ ಕೊರಗ ಸಂಘಟನೆ ಮೂಲಕ ಸಾಮೂಹಿಕ ವಿವಾಹ ನಡೆಸಿಕೊಂಡು ಬಂದಿದ್ದು ಇದುವರೆಗೆ 23 ಜೋಡಿಗಳಿಗೆ ಮೂಲ ಸಂಪ್ರದಾಯದ ಪ್ರಕಾರ ವಿವಾಹ ನೆರವೇರಿಸಿದ್ದೇವೆ. ವ್ಯರ್ಥ ಖರ್ಚು ಮತ್ತು ಮೂಲ ಸಂಪ್ರದಾಯ ಉಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. -ಸುಂದರ ಬೆಳುವಾಯಿಅಧ್ಯಕ್ಷರು, ದ.ಕ.ಜಿಲ್ಲಾ ಕೊರಗ ಸಂಘ

ಆಧುನೀಕರಣದಿಂದ ಮೂಲ ಸಂಪ್ರದಾಯಕ್ಕೆ ಧಕ್ಕೆ ಆಗಿದೆ. ನಮ್ಮ ಸಂಖ್ಯೆ ಕಡಿಮೆ ಮಾತ್ರವಲ್ಲ, ಮೂಲ ಭಾಷೆಯನ್ನೇ ಮರೆತಿದ್ದೇವೆ. ಹೆಚ್ಚಿನ ಜನರಿಗೆ ಮೂಲ ಕೊರಗ ಭಾಷೆ ಗೊತ್ತಿಲ್ಲ. ಸಂಘಟನೆ ಮೂಲಕ ಪ್ರಮುಖವಾಗಿ ಸಮುದಾಯದವರು ಶಿಕ್ಷಣ ಪಡೆಯುವಂತೆ ಪ್ರೇರಣೆ ನೀಡಲಾಗುತ್ತಿದೆ. -ಪಾಂಗಳ ಬಾಬು ಕೊರಗ https://www.vijayavani.net/thokkottu-olapete-road-is-closed https://www.vijayavani.net/a-banner-was-installed-in-tulu-at-kuppepadavu

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net