

ಮಂಗಳೂರು: ನೈತಿಕ ಪೊಲೀಸ್‌ಗಿರಿ ನಡೆಸಿದ ಆರೋಪದಲ್ಲಿ 5 ಮಂದಿಯನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.
ಗಣೇಶ್, ಶ್ರೇಯಸ್, ಚಿಂಟು, ಚಂದನ್ ಮತ್ತು ನಾಗರಾಜ್ ಬಂಧಿತರು.
ಕಳೆದ ಸೋಮವಾರದಂದು ಪರಸ್ಪರ ಭಿನ್ನ ಕೋಮಿನ ಯುವತಿ ಮತ್ತು ಯುವಕ ಮಾತನಾಡುತ್ತಾ ಹೋಗುತ್ತಿದ್ದ ವೇಳೆ ಆರೋಪಿಗಳು ತಡೆದು ಜೀವಬೆದರಿಕೆಯೊಡ್ಡಿದ್ದಾರೆ. ಈ ಬಗ್ಗೆ ಯುವತಿ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ನಗರದ ಪ.ಪೂ. ಕಾಲೇಜೊಂದರ ಪಿಯುಸಿ ವಿದ್ಯಾರ್ಥಿನಿಯಾಗಿರುವ ಯುವತಿ ಕಾಲೇಜು ಮುಗಿಸಿ ತನ್ನ ಗೆಳತಿಯೊಂದಿಗೆ ಸರ್ವೀಸ್ ಬಸ್ ನಿಲ್ದಾಣಕ್ಕೆ ಬಂದಿದ್ದಳು. ಬಳಿಕ ಗೆಳತಿ ಅಲ್ಲಿಂದ ಬಸ್‌ನಲ್ಲಿ ತನ್ನ ಮನೆಗೆ ತೆರಳಿದ್ದಳು. ಅನಂತರ 3.30ರ ಸುಮಾರಿಗೆ ಅಲ್ಲಿಗೆ ಬಂದ ತನ್ನ ಸ್ನೇಹಿತೆಯ ಸಂಬಂಧಿ ಯುವಕನೊಂದಿಗೆ ಯುವತಿ ಮಾತನಾಡಿಕೊಂಡು ಹೋಗುತ್ತಿದ್ದಾಗ ಸುಮಾರು 7ರಿಂದ 8 ಮಂದಿ ಅಪರಿಚಿತರು ಅಡ್ಡಗಟ್ಟಿ ಅನ್ಯ ಧರ್ಮದ ಯುವಕನೊಂದಿಗೆ ಯಾಕೆ ಹೋಗುತ್ತಿದ್ದೀಯಾ, ಏನು ಮಾತನಾಡುತ್ತಿದ್ದೀಯಾ ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು ಜೀವಬೆದರಿಕೆ ಹಾಕಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು.