

ಮಡಿಕೇರಿ: ಹಾಕಿ ಹಬ್ಬದ ಜನಕ ಪಾಂಡಂಡ ಕುಟ್ಟಪ್ಪ(ಕುಟ್ಟಣಿ)ರವರ ಸ್ಮರಣಾರ್ಥ ಕೊಡವ ಹಾಕಿ ಅಕಾಡೆಮಿ ವತಿಯಿಂದ ಅ೨೭ ರಿಂದ ನ೬ರ ವರೆಗೆ ಕೊಡವ ಕುಟುಂಬಗಳ ನಡುವೆ ನಾಕೌಟ್ ಮಾದರಿಯ "೫-ಎ ಸೈಡ್" ಹಾಕಿ ಪಂದ್ಯಾವಳಿ ನಡೆಯಲಿದೆ ಎಂದು ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆಯಲಿರುವ ಪಂದ್ಯಾವಳಿಗೆ ಪ್ರವೇಶ ಶುಲ್ಕ ರೂ.೧೦೦೦ ನಿಗಧಿಪಡಿಸಲಾಗಿದ್ದು, ನೋಂದಾವಣಿ ಪ್ರಕ್ರಿಯೆ ಅ೧ ರಿಂದ ಆರಂಭಗೊಳ್ಳಲಿದೆ. ೧೮೦ ತಂಡಗಳು ನೋಂದಾವಣಿ ಮಾಡಿದ ನಂತರ ಬರುವ ತಂಡಗಳಿಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.
ಅ೨೭ ರಂದು ಬೆಳಗ್ಗೆ ೧೦ ಗಂಟೆಗೆ ಪಂದ್ಯಾವಳಿಯ ಉದ್ಘಾಟನಾ ಸಮಾರಂಭ ನಡೆಯಲಿದ್ದು, ನ೬ ರಂದು ಭಾನುವಾರ ಬೆಳಗ್ಗೆ ಎರಡು ಸೆಮಿಫೈನಲ್ ಪಂದ್ಯಾವಳಿಗಳು ನಡೆಯಲಿವೆ. ಅದೇ ದಿನ ಮಧ್ಯಾಹ್ನ ೩.೩೦ ಗಂಟೆಗೆ ಫೈನಲ್ ಪಂದ್ಯಾವಳಿ ಹಾಗೂ ಬಹುಮಾನ ವಿತರಣಾ ಸಮಾರಂಭ ಜರುಗಲಿದೆ ಎಂದು ತಿಳಿಸಿದರು.
ಕೊಡವ ಹಾಕಿ ಅಕಾಡೆಮಿಯ ಚುನಾವಣೆಯು ೨೦೨೨ ಮೇ ತಿಂಗಳಿನಲ್ಲಿ ನಡೆದಿದ್ದು, ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ೨೦೧೯ ರಿಂದ ಇಲ್ಲಿಯವರೆಗೆ ಕೋವಿಡ್ ಹಾಗೂ ಅತಿವೃಷ್ಟಿ ಸಂಕಷ್ಟದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಯಾವುದೇ ಪಂದ್ಯಾವಳಿಗಳನ್ನು ನಡೆಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.
ಸೋಮವಾರಪೇಟೆ ತಾಲೂಕು ಉಪಾಧ್ಯಕ್ಷ ಕುಕ್ಕೇರ ಜಯಾ ಚಿಣ್ಣಪ್ಪ, ಪಂದ್ಯಾವಳಿಯ ವಿಜೇತರಿಗೆ ಮೊದಲನೇ ಬಹುಮಾನ ರೂ. ೧ಲಕ್ಷ, ದ್ವಿತೀಯ ಬಹುಮಾನ ರೂ೫೦ ಸಾವಿರ, ಸೆಮಿಫೈನಲ್‌ನಲ್ಲಿ ಸೋತ ಎರಡು ತಂಡಗಳಿಗೆ ತಲಾ ೧೫ ಸಾವಿರ ರೂ.ಗಳನ್ನು ನೀಡಲಾಗುವುದು. ಕ್ವಾಟರ್ ಫೈನಲ್ಸ್‌ನಲ್ಲಿ ಸೋತ ನಾಲ್ಕು ತಂಡಗಳಿಗೆ ತಲಾ ೫ ಸಾವಿರ ರೂ.ಗಳನ್ನು ನೀಡಲಾಗುವುದು ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಕಾರ್ಯಾಧ್ಯಕ್ಷ ಮೇಕೇರಿರ ರವಿ ಪೆಮ್ಮಯ್ಯ, ಮಡಿಕೇರಿ ತಾಲೂಕು ಉಪಾಧ್ಯಕ್ಷ ಬಡ್ಕಡ ಡೀನಾ ಪೂವಯ್ಯ, ಕಾರ್ಯದರ್ಶಿ ಮಾಳೇಟಿರ ಎ.ಶ್ರೀನಿವಾಸ್, ವಿರಾಜಪೇಟೆ ತಾಲೂಕು ಉಪಾಧ್ಯಕ್ಷ ಮಾದಂಡ ಎಸ್.ಪೂವಯ್ಯ ಹಾಜರಿದ್ದರು.