ಲಕ್ಯಾ ಸಹಕಾರ ಸಂಘಕ್ಕೆ 5.95 ಲಕ್ಷ ರೂ.ಲಾಭ

23 CKM 5
ಲಖ್ಯಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉಪಾಧ್ಯಕ್ಷ ಕೆ.ಎಂ.ಜಗದೀಶ್ ಉದ್ಘಾಟಿಸಿದರು. ಕೆ.ಎಂ.ಜಗದೀಶ್, ಎಚ್.ಆರ್.ಅಣ್ಣೇಗೌಡ, ಎಲ್.ಎಸ್.ಶ್ರೀಕಾಂತ್ ಇದ್ದರು.
Published on

ಚಿಕ್ಕಮಗಳೂರು: ಲಕ್ಯಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ 5.95 ಲಕ್ಷ ರೂ. ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಚ್.ಬಿ.ಉಮೇಶ್ ಹೇಳಿದರು.
ಲಖ್ಯಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಶನಿವಾರ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲಾಭದಲ್ಲಿ ಶೇ.2ರಷ್ಟು ಡಿವಿಡೆಂಡನ್ನು ಸದಸ್ಯರಿಗೆ ವಿತರಿಸಲಾಗುವುದು. ಸದ್ಯದಲ್ಲೇ ಸಂಘದ ಕಟ್ಟಡದ ಮೇಲೆ ನೂತನ ಸಭಾಂಗಣ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಸದಸ್ಯರು ಮತ್ತು ಷೇರುದಾರರ ಬೆಂಬಲದಿಂದ ಸಂಘ ಪ್ರತಿ ವರ್ಷ ಲಾಭಗಳಿಸುತ್ತಾ ಅಭಿವೃದ್ಧಿ ಹಾದಿಯಲ್ಲಿದೆ. ಡಿಸಿಸಿ ಬ್ಯಾಂಕ್‌ನಿಂದ ಸ್ವಸಹಾಯ ಸಂಘಗಳಿಗೆ ನೀಡಲಾಗುವ ಸಾಲದ ಮೊತ್ತವನ್ನು 3 ರಿಂದ 5 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.
ಸಂಘದ ಮಾಜಿ ಅಧ್ಯಕ್ಷ ಡಿ.ಎಂ.ಕೃಷ್ಣೆಗೌಡ ಮಾತನಾಡಿ, ಸಹಕಾರ ಸಂಘಗಳಲ್ಲಿ ಯಾವುದೇ ರಾಜಕಾರಣ ಮಾಡಬಾರದು. ಎಲ್ಲರೂ ಪಕ್ಷಾತೀತವಾಗಿ ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸಬೇಕು. ಸಹಕಾರ ಸಂಸ್ಥೆಗಳು ಕೇವಲ ಲಾಭವನ್ನು ಮಾತ್ರ ಎದುರು ನೋಡದೆ ಸೇವಾ ಮನೋಭಾವನೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಕೆ.ಎಂ.ಜಗದೀಶ್ ಕಾರ್ಯಕ್ರಮ ಉದ್ಘಾಟಿಸಿದರು. ಸಿಇಒ ಎಚ್.ಆರ್.ಅಣ್ಣೇಗೌಡ ವಾರ್ಷಿಕ ವರದಿ ಮಂಡಿಸಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಲ್.ಎಸ್.ಶ್ರೀಕಾಂತ್, ಜನತಾ ಬಜಾರ್ ಮಾಜಿ ಅಧ್ಯಕ್ಷ ಮಲ್ಲೇದೇವರಪ್ಪ, ನಿರ್ದೇಶಕ ಎಲ್.ಜಯಣ್ಣ, ಗೋಪಾಲಸ್ವಾಮಿ, ಎಚ್.ಕೆ.ಸಿದ್ದೇಗೌಡ, ಎಲ್.ಎನ್.ತೇಜು, ಮಂಜುಳಾ, ಸಾವಿತ್ರಮ್ಮ, ಎಲ್.ಕೆ.ಬಸವರಾಜ್, ಸಿಬ್ಬಂದಿಗಳಾದ ಎಲ್.ಈ.ಅನಿತಾ, ಎಲ್.ಎಂ.ಸಿದ್ದೇಶ್, ಗ್ರಾಪಂ ಅಧ್ಯಕ್ಷ ಮಹಮ್ಮದ್ ಹನೀಫ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net