ಅಟ್ರಿಂಜೆಗೆ 5.8 ಕೋಟಿ ರೂ. ಅನುದಾನ : ಕೊರಗ ಕಾಲನಿ ಅಭಿವೃದ್ಧಿಗೆ ಮಂಜೂರು : ಜಿಲ್ಲಾಧಿಕಾರಿ ಸಹಿತ ಅಧಿಕಾರಿಗಳನ್ನು ಬರಿಸಿದ್ದ ವಿಜಯವಾಣಿ ವರದಿ

Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ತಾಲೂಕಿನ ಸುಲ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾವರ ಗ್ರಾಮದ ಅಟ್ರಿಂಜೆಯ ಕೊರಗ ಕಾಲನಿಗೆ ಕೊನೆಗೂ ರಸ್ತೆ ಹಾಗೂ ಸೇತುವೆ ಮಂಜೂರಾಗಿದ್ದು, ಇಲ್ಲಿನ ಕುಟುಂಬಗಳ ಬಹುದಿನದ ಬೇಡಿಕೆಯೊಂದು ಈಡೇರಿದಂತಾಗಿದೆ.

ಅಟ್ರಿಂಜೆಯ ಕೊರಗ ಕುಟುಂಬಗಳ ಸಂಕಷ್ಟದ ಬದುಕನ್ನು ಏಳು ವರ್ಷಗಳ ಹಿಂದೆ ಹೊರ ಜಗತ್ತಿಗೆ ಪರಿಚಯಿಸಿತ್ತು. ಅಂದು ಡೇರೆಗಳನ್ನು ಕಟ್ಟಿಕೊಂಡು ಬದುಕನ್ನು ನಡೆಸುತ್ತಿದ್ದ ಇಲ್ಲಿನ ನಿವಾಸಿಗಳು ಸರ್ಕಾರದ ಮುಂದಿಟ್ಟ ದೊಡ್ಡ ಬೇಡಿಕೆಯೇ ತಮಗೂ ಒಂದು ಸೇತುವೆ ಬೇಕು ಎಂಬುದಾಗಿತ್ತು. ಇದೀಗ ಅಟ್ರಿಂಜೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ 285 ಲಕ್ಷ ರೂ. ಹಾಗೂ ಸೇತುವೆ ನಿರ್ಮಾಣಕ್ಕೆ 267 ಲಕ್ಷ ರೂ. ಅನುದಾನ ಮಂಜೂರುಗೊಂಡಿದೆ. ಕೊರಗ ಸಮುದಾಯದ ಕಾಲನಿಗಳಿಗೆ ಮೂಲಸೌಲಭ್ಯ ಒದಗಿಸುವ ಯೋಜನೆಯ ಅಡಿಯಲ್ಲಿ ಈ ಅನುದಾನ ಮಂಜೂರಾಗಿದೆ.

ಅಂದು ಬೆಳ್ತಂಗಡಿ ವಿಜಯವಾಣಿ ವರದಿಗಾರ ಮಳೆಯನ್ನು ಲೆಕ್ಕಿಸದೆ ಅಪಾಯ ಮರೆತು ಕೊರಗ ಕುಟುಂಬದ ಜತೆ ವಿಜಯವಾಣಿ ಇದೆ ಎಂದು ಅಪಾಯಕಾರಿಯಾಗಿ ಹರಿಯುತ್ತಿ ನೀರಿನಲ್ಲಿ ಹೋಗಿ ವರದಿ ಮಾಡಿದ್ದರು. ಫಲವಾಗಿ, ಇಲ್ಲಿನ ಕುಟುಂಬಗಳ ಸಂಕಷ್ಟದ ಬದುಕಿನ ವಿಚಾರವನ್ನು ಹೊರ ಜಗತ್ತಿಗೆ ಪರಿಚಯಿಸಿದ ಬೆನ್ನಲ್ಲಿಯೇ ಜಿಲ್ಲಾಧಿಕಾರಿ ಸೇರಿ ಹಲವರು ಆಧಿಕಾರಿಗಳ ದಂಡೇ ಕೊರಗ ಕಾಲನಿಗೆ ಭೇಟಿ ನೀಡಿತ್ತು. ಅವರ ಇತರ ಮೂಲ ಬೇಡಿಕೆಗಳು ಈಡೇರಿದ್ದರೂ ಸೇತುವೆ ಹಾಗೂ ರಸ್ತೆಯ ಕನಸು ಮಾತ್ರ ಈಡೇರಿರಲಿಲ್ಲ. ಇಲ್ಲಿ ವಾಸಿಸುತ್ತಿರುವ ಐದು ಕುಟುಂಬಗಳ ಜನರು ತಮ್ಮ ಮನೆಗಳಿಂದ ಹೊರ ಬರಬೇಕಾದರೆ ನದಿಗೆ ಅಡ್ಡಲಾಗಿ ಮರ ಕಡಿದು ಹಾಕಿ ನಿರ್ಮಿಸಲಾಗಿದ್ದ ಸೇತುವೆಯ ಮೂಲಕವೇ ಬರಬೇಕಾಗಿತ್ತು. ಮಳೆ ಜೋರಾಗಿ ಬಂದರೆ ಅದನ್ನು ದಾಟುವುದು ಅಸಾಧ್ಯವಾಗುತ್ತಿತ್ತು. ಆದ್ದರಿಂದ ಇಲ್ಲಿನ ಮಕ್ಕಳು ಶಾಲೆಗೆ ಹೋಗುವುದಂತೂ ಮಳೆಗಾಲದಲ್ಲಿ ಸಾಧ್ಯವಿರಲಿಲ್ಲ.

ಅಪಾಯಕಾರಿ ಮರದ ದಿಮ್ಮಿ ಸೇತುವೆ.
ಅಪಾಯಕಾರಿ ಮರದ ದಿಮ್ಮಿ ಸೇತುವೆ.

ಡೇರೆಗೆ ಕೊನೆಗೂ ಮುಕ್ತಿ

ಕಳೆದ ಹತ್ತು ವರ್ಷಗಳಿಂದ ಈ ಕೊರಗ ಕುಟುಂಬಗಳು ಇಲ್ಲಿಯೇ ಮನೆಯನ್ನು(ಡೇರೆ) ಕಟ್ಟಿ ವಾಸಿಸುತ್ತಿದ್ದಾರೆ. ಆರಂಭದಲ್ಲಿ ಇವರಿಗೆ ಆಧಾರ್ ಸೇರಿದಂತೆ ಯಾವುದೇ ದಾಖಲೆಗಳಿರಲಿಲ್ಲ. ಇದೀಗ ಇವರ ಬಳಿ ಎಲ್ಲ ದಾಖಲೆಗಳೂ ಇವೆ. ಮನೆಗಳು ಮಾತ್ರ ನಿರ್ಮಾಣವಾಗಿಲ್ಲ. ಇದೀಗ ಐದು ಕುಟುಂಬಗಳಿಗೂ ರಾಜೀವ ಗಾಂಧಿ ವಸತಿ ಯೋಜನೆಯಲ್ಲಿ ಮನೆಗಳೂ ಮಂಜೂರಾಗಿದ್ದು ಕೆಲವೇ ದಿನಗಳಲ್ಲಿ ಮನೆಗಳ ನಿರ್ಮಾಣ ಕಾರ್ಯವೂ ಆರಂಭಗೊಳ್ಳಲಿದೆ ಎಂದು ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಹೇಮಚಂದ್ರ ಮಾಹಿತಿ ನೀಡಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ಸಂಕಷ್ಟದ ಬದುಕು ನಡೆಸುತ್ತಿದ್ದೆವು. ಇದೀಗ ನಮಗೂ ರಸ್ತೆ, ಸೇತುವೆ ಮಂಜೂರಾಗಿದ್ದು ನಮ್ಮ ಬಹುದಿನದ ಬೇಡಿಕೆ ಈಡೇರಿದಂತಾಗಿದೆ. ನಮಗೆ ರಸ್ತೆ ಹಾಗೂ ಸೇತುವೆಯನ್ನು ಮಂಜೂರು ಮಾಡಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇವೆ. - ಸವಿತಾ ಅಟ್ರಿಂಜೆ, ಸ್ಥಳೀಯ ನಿವಾಸಿ ಕೊರಗ ಕುಟುಂಬದ ಸಮಸ್ಯೆಗೆ ವಿಜಯವಾಣಿ ಪತ್ರಿಕೆ ಕಾಳಜಿ ವಹಿಸುತ್ತಿದೆ ಎಂದರೆ ಇದು ಪತ್ರಿಕೆಯೊಂದರ ನೈಜ ಕಾಳಜಿ. ನೊಂದ ಕುಟುಂಬಗಳ ಪರ ಎಂದೂ ಇರುವ ಪತ್ರಿಕೆ ವಿಜಯವಾಣಿ. ಇದೇ ಕಾಳಜಿ ಎಲ್ಲ ಮಾಧ್ಯಮಗಳಲ್ಲಿ ಇರಲಿ. - ಶೇಖರ್, ದಲಿತ ಹಕ್ಕು ಹೋರಾಟ ಮುಖಂಡ

ಅಟ್ರಿಂಜೆ ಕೊರಗ ಕಾಲನಿಯ ಸಮಸ್ಯೆ ಬಗ್ಗೆ ವಿಜಯವಾಣಿಯಲ್ಲಿ ವರದಿ ಪ್ರಕಟವಾಗಿರುವುದು.
ಅಟ್ರಿಂಜೆ ಕೊರಗ ಕಾಲನಿಯ ಸಮಸ್ಯೆ ಬಗ್ಗೆ ವಿಜಯವಾಣಿಯಲ್ಲಿ ವರದಿ ಪ್ರಕಟವಾಗಿರುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net