

ಜಮಖಂಡಿ: ತೇರದಾಳ ಪಟ್ಟಣದ ಅಲ್ಲಮಪ್ರಭು ದೇವರ ದೇವಸ್ಥಾನವನ್ನು ಸರ್ಕಾರದಿಂದ ಯಾವುದೇ ಅನುದಾನ ಪಡೆಯದೆ ಭಕ್ತರ ದೇಣಿಗೆಯಿಂದ ಅಂದಾಜು 5.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದು, ನೂತನ ದೇವಸ್ಥಾನ ನ.11ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.
ನಗರದ ಸಾಕ್ಷಾತ್ಕಾರ ನಿವಾಸದ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ದೇವಸ್ಥಾನ ಲೋಕಾರ್ಪಣೆ ನಿಮಿತ್ತ ಅ.14ರಿಂದ ನ.11 ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅ.14ರಂದು ಬೆಳಗ್ಗೆ 8 ಗಂಟೆಗೆ ಅಲ್ಲಮಪ್ರಭುಗಳ ಜನ್ಮಸ್ಥಳವಾದ ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವಿಯಿಂದ ಆಗಮಿಸುವ ಪರಂಜ್ಯೋತಿಯನ್ನು ಚಿಮ್ಮಡ ಮಠದಿಂದ ಪಾದಯಾತ್ರೆ ಮೂಲಕ ತೇರದಾಳ ಪಟ್ಟಣದ ದೆವಸ್ಥಾನದವರೆಗೆ ಬರಮಾಡಿಕೊಳ್ಳಲಾಗುವುದು ಎಂದರು.
ಅ.14ರಿಂದ ಪ್ರತಿ ದಿನ ಸಂಜೆ 6ಗಂಟೆಗೆ ಬಸವ ಪುರಾಣ, ನ.9ರಂದು ಭವ್ಯ ವಚನೋತ್ಸವ, ಸರ್ವಧರ್ಮ ಸಮ್ಮೇಳನ, ಮಹಿಳಾ ಸಮಾವೇಶ, ಸೈನಿಕ ಸಮಾವೇಶ, ಜಾನಪದ ಸಂಭ್ರಮ, ರೈತ ಸಮಾವೇಶ ಮತ್ತು ಯುವಜನೋತ್ಸವ ಕಾರ್ಯಕ್ರಮ ಜರುಗಲಿವೆ ಎಂದರು.
ಅ.14ರಂದು ಸಂಜೆ 6ಗಂಟೆಗೆ ಬಸವ ಮಹಾಪುರಾಣ ಪ್ರಾರಂಭೋತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಹಂದಿಗುಂದ ವಿರಕ್ತಮಠದ ಶಿವಾನಂದ ಸ್ವಾಮಿಗಳು, ಜಮಖಂಡಿ ಓಲೇಮಠದ ಡಾ. ಕುಮಾರ ಚನ್ನಬಸವ ಸ್ವಾಮಿಗಳು, ಚಿಮ್ಮಡ ವಿರಕ್ತಮಠದ ಪ್ರಭು ಸ್ವಾಮಿಗಳು, ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯರು, ಜಮಖಂಡಿ ಕಲ್ಯಾಣಮಠದ ಗೌರಿಶಂಕರ ಶಿವಾಚಾರ್ಯರು, ಜಮಖಂಡಿ ಮುತ್ತಿನಕಂತಿಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು, ನೀಲಕಂಠೇಶ್ವರಮಠದ ಶಿವಶಂಕರ ಶ್ರೀಗಳು, ಹಳಿಂಗಳಿ ಕಮರಿಮಠದ ಶಿವಾನಂದ ಶ್ರೀಗಳು, ಕೊಣ್ಣೂರ ಕಲ್ಯಾಣ ಹೊರಗಿನಮಠದ ವಿಶ್ವಪ್ರಭು ಶಿವಾಚಾರ್ಯರು, ರಬಕವಿ ಬ್ರಹ್ಮಾನಂದ ಆಶ್ರಮದ ಗುರುಸಿದ್ದೇಶ್ವರ ಶ್ರೀಗಳು ವಹಿಸುವರು. ಶೇಗುಣಶಿ ವಿರಕ್ತಮಠದ ಮಹಾಂತಪ್ರಭು ಸ್ವಾಮಿಗಳು ಪ್ರವಚನ ನೀಡುವರು. ತೇರದಾಳ ಹಿರೇಮಠದ ಬಾಲಗಂಗಾಧರ ದೇವರು, ಟ್ರಸ್ಟ್ ಕಮಿಟಿ ಅಧ್ಯಕ್ಷ ಗುಹೇಶ್ವರ ಪುರಾಣಿಕಮಠ ಸಮ್ಮುಖ ವಹಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಖಂಡಿ ಶಾಸಕ ಜಗದೀಶ ಗುಡಗುಂಟಿ ವಹಿಸುವರು, ಮುಖ್ಯ ಅತಿಥಿಗಳಾಗಿ ತೇರದಾಳ ಶಾಸಕ ಸಿದ್ದು ಸವದಿ, ಸಂಸದ ಪಿ.ಸಿ. ಗದ್ದಿಗೌಡರ, ವಿಪ ಸದಸ್ಯರಾದ ಉಮಾಶ್ರೀ, ಹಣಮಂತ ನಿರಾಣಿ, ಮುಖಂಡ ಪ್ರವೀಣ ನಾಡಗೌಡ, ಪುರಸಭೆ ಅಧ್ಯಕ್ಷೆ ಶಿಲ್ಪಾ ರೋಡಕರ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿ, 12ನೇ ಶತಮಾನದ ಬಸವಾದಿ ಶರಣರಿಗೆ ಸೂಕ್ತ ಮಾರ್ಗದರ್ಶನ ಮತ್ತು ಪ್ರೇರಣೆ ನಿಡಿದ ಅಲ್ಲಮಪ್ರಭು ದೇವರು ಯಾವುದೇ ಜಾತಿಗೆ ಸೀಮಿತರಾದವರಲ್ಲ. ಜಾತ್ಯತೀತವಾಗಿ ಎಲ್ಲರನ್ನು ಸಮಾನತೆ ಕಡೆಗೆ ಕೊಂಡೊಯ್ದವರು. ಇಂದು ಅವರ ದೇವಸ್ಥಾನ ಜೀರ್ಣೋದ್ಧಾರಗೊಳಿಸಿ ಲೋಕಾರ್ಪಣೆಗೊಳ್ಳುತ್ತಿರವುದು ಸಂತಸದ ಸಂಗತಿ ಎಂದರು.
ಹಂದಿಗುಂದ ವಿರಕ್ತಮಠದ ಶಿವಾನಂದ ಮಹಾಸ್ವಾಮಿಗಳು ಮಾತನಾಡಿ, ಅಲ್ಲಮಪ್ರಭು ದೇವರ ದೇವಸ್ಥಾನ ಪುನರ್ನಿರ್ಮಾಣವಾಗಿದೆ. ಅ.14ರಿಂದ ನ.11ರವರೆಗೆ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಪ್ರತಿದಿನ ಒಂದೊಂದು ಗ್ರಾಮದಿಂದ ಕಾಯಕ ಮತ್ತು ದಾಸೋಹ ನಡೆಯಲಿದೆ ಎಂದರು.
ಅಲ್ಲಮಪ್ರಭು ದೇವರ 1612 ವಚನಗಳನ್ನೊಳಗೊಂಡ ಗ್ರಂಥಗಳನ್ನು 6ಸಾವಿರ ಜನರ ತಲೆ ಮೇಲೆ ಹೊತ್ತು ವಚನೋತ್ಸವ ನಡೆಸಲಾಗುವುದು ಎಂದರು.
ಶೇಗುಣಶಿ ಮಠದ ಮಹಾಂತಪ್ರಭು ಸ್ವಾಮಿಗಳು ಮಾತನಾಡಿ, ಜ್ಞಾನಕ್ಕೆ ಮಹತ್ವ ನೀಡಿದ ಅಲ್ಲಮಪ್ರಭುಗಳ 11ವಚನಗಳನ್ನು ಏಕಕಾಲದಲ್ಲಿ 11ಸಾವಿರ ಜನ ಓದುವ ಮೂಲಕ ಹೊಸ ಇತಿಹಾಸ ಬರೆಯಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಚಿಮ್ಮಡ ವಿರಕ್ತಮಠದ ಪ್ರಭು ಸ್ವಾಮಿಗಳು, ತೇರದಾಳ ಹಿರೇಮಠದ ಬಾಲಗಂಗಾಧರ ದೇವರು, ಪ್ರವೀಣ ನಾಡಗೌಡ, ನಾಗಪ್ಪ ಸನದಿ, ನಿಂಗಪ್ಪ ಮಾಲಗಾಂವಿ, ದೇವಲ ದೇಸಾಯಿ, ವಿಜಯಮಹಾಂತ ನಾಡಗೌಡ, ಈಶ್ವರ ಯಲ್ಲಟ್ಟಿ, ಬುಜಬಲಿ, ರಾಮಣ್ಣ ಹಿಡಕಲ್, ಕೇದಾರಿ ಪಾಟೀಲ, ರಾಜು ಹೊಸಮನಿ ಇತರರು ಇದ್ದರು.