

ಬೆಂಗಳೂರು: ಮಹದೇವಪುರ ವಲಯ ವೈಟ್ಫೀಲ್ಡ್ ವಾರ್ಡ್ ಪಟ್ಟಂದೂರು ಅಗ್ರಹಾರ ಗ್ರಾಮದಲ್ಲಿ 5.35 ಕೋಟಿ ರೂ.ಮೌಲ್ಯದ ಒತ್ತುವರಿ ಮಾಡಿಕೊಂಡಿದ್ದ ಸರ್ಕಾರಿ ಜಾಗವನ್ನು ಬಿಬಿಎಂಪಿ ಅಧಿಕಾರಿಗಳು ಶುಕ್ರವಾರ ತೆರವುಗೊಳಿಸಿ, ಮರುವಶಕ್ಕೆ ಪಡೆದರು.
ಬೆಂಗಳೂರು ಪೂರ್ವ ತಾಲೂಕಿನ ಕೆ.ಆರ್.ಪುರ ಹೋಬಳಿ ಪಟ್ಟಂದೂರು ಅಗ್ರಹಾರ ಗ್ರಾಮದ ಸರ್ವೆ ಸಂಖ್ಯೆ 134/5ರಲ್ಲಿ ಸರ್ಕಾರಿ ಬಂಡಿದಾರಿ ಜಾಗದಲ್ಲಿ ಹಿಂದಿನಿಂದಲೂ ವಾಹನಗಳು ಸಂಚರಿಸುತ್ತಿದ್ದವು. ಬಿ. ರಾಮಚಂದ್ರ ನಾಯ್ಡು ಎಂಬುವರು, ರಸ್ತೆ ಆತಿಕ್ರಮಿಸಿಕೊಂಡು ಅಡ್ಡಲಾಗಿ ಕಬ್ಬಿಣದ ಬ್ಯಾರಿಕೇಡ್ ಅಳವಡಿಸಿ ಸಾರ್ವಜನಿಕರು, ವಾಹನಗಳು ಸಂಚರಿಸದಂತೆ ಅಡ್ಡಿಪಡಿಸಿದ್ದರು. ರಸ್ತೆಯಲ್ಲಿಯೇ ಖಾಸಗಿ ಹೋಟೆಲ್ ನಡೆಸಲು ಜಾಗವನ್ನು ಬಾಡಿಗೆಗೆ ನೀಡಿ ಹಣ ಪಡೆಯುತ್ತಿದ್ದರು.
ಮಹದೇವಪುರ ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಅಧಿಕಾರಿಗಳು, ತಹಸೀಲ್ದಾರ್, ಭೂಮಾಪಕರು, ರಾಜಸ್ವ ನಿರೀಕರು ಹಾಗೂ ಪೊಲೀಸರ ಸಹಯೋಗದೊಂದಿಗೆ ಒತ್ತುವರಿ ಮಾಡಿಕೊಂಡಿದ್ದ ಜಾಗವನ್ನಿ ತೆರವುಗೊಳಿಸಿದರು. ರಸ್ತೆಯನ್ನು ಅಭಿವೃದ್ಧಿಪಡಿಸಲು ಅದೇ ದಿನ ಕಾಮಗಾರಿ ಕೈಗೆತ್ತಿಗೊಳ್ಳಲಾಗಿದೆ.