

ವಿಜಯವಾಣಿ ಸುದ್ದಿಜಾಲಹುಬ್ಬಳ್ಳಿ
ವಾರ್ಡ್ ಸಂಖ್ಯೆ 80ರಲ್ಲಿ 5.13ಕೋಟಿ ರೂ. ಅನುದಾನದಲ್ಲಿ 3 ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕ ಪ್ರಸಾದ ಅಬ್ಬಯ್ಯ ಚಾಲನೆ ನೀಡಿದರು.
1.3 ಕೋಟಿ ರೂ. ವೆಚ್ಚದಲ್ಲಿ ಹಳೇಹುಬ್ಬಳ್ಳಿ ಮಾವನೂರು ರಸ್ತೆ ಸೇತುವೆಯಿಂದ ಮಾವನೂರವರೆಗೆ, 2.53 ಕೋಟಿ ರೂ.ನಲ್ಲಿ ಮಾವನೂರ ಸೇತುವೆಯಿಂದ ಬೆಳಗಲಿವರೆಗೆ ಹಾಗೂ 1.30 ಕೋಟಿ ರೂ. ಅನುದಾನದಲ್ಲಿ ನೇಕಾರನಗರ ಕ್ರಾಸ್ನಿಂದ ತಿಮ್ಮಸಾಗರ ವರೆಗೆ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಲಾಯಿತು.
ವಿರೋಧ ಪಕ್ಷದ ಸುಳ್ಳು ಆರೋಪ, ಷಡ್ಯಂತ್ರಗಳ ನಡುವೆಯೂ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಲೇ ಇವೆ. ಸರ್ಕಾರ ಮತ್ತು ಮುಖ್ಯಮಂತ್ರಿಯವರ ಮೇಲೆ ಆರೋಪ ಮಾಡುವ ಮೂಲಕ ರಾಜ್ಯದ ಜನರ ದಿಕ್ಕು ತಪ್ಪಿಸಲಾಗುತ್ತಿದೆ. ಜನರು ಜಾಗೃತರಾಗಬೇಕು. ಗ್ಯಾರಂಟಿ ಯೋಜನೆಗಳಿಗೆ ಹಣ ಸಾಲುತ್ತಿಲ್ಲ. ಸರ್ಕಾರದ ಬೊಕ್ಕಸ ಖಾಲಿಯಾಗಿದೆ ಎಂಬಿತ್ಯಾದಿ ಸುದ್ದಿಗಳು ಸತ್ಯಕ್ಕೆ ದೂರವಾದವು ಎಂದು ಶಾಸಕ ಅಬ್ಬಯ್ಯ ಹೇಳಿದರು.
ಬಣ್ಣದ ಮಾತುಗಳಿಗೆ ಮರುಳಾಗಬೇಡಿ. ಬೋಗಸ್ ಆಶ್ವಾಸನೆಗಳನ್ನು ನಂಬಬೇಡಿ. ಜಾತಿ ಹೆಸರಲ್ಲಿ ಸಮಾಜ ಒಡೆಯುವವರನ್ನು ಮತ್ತು ಸಮಾಜ ಘಾತುಕ ಶಕ್ತಿಗಳನ್ನು ತಿರಸ್ಕರಿಸಿ ಎಂದು ಹೇಳಿದರು.
ಮುಖಂಡರಾದ ರಾಜಕುಮಾರ ಕಾಮರೆಡ್ಡಿ, ಬಾಗಣ್ಣ ಬಿರಾದಾರ, ರಾಕೇಶ ಪಲ್ಲಾಟೆ, ಗಿರೀಶ ಮಾನಶೆಟ್ಟರ, ಕುಮಾರ ಕುಂದನಹಳ್ಳಿ, ಮುಸ್ತಾಕ ಮುದಗಲ್, ಸೈಯದ್ ಸಲೀಂ ಮುಲ್ಲಾ, ಸೀಮಾ ಕಾಂಬಳೆ, ಆರೀಫ್ ದೊಡ್ಡಮನಿ, ಇತರರು ಇದ್ದರು.