

ಮಡಿಕೇರಿ: ಕರುನಾಡಿನ ಜೀವನದಿ ಕೊಡವರ ಕುಲದೇವಿ ತಾಯಿ ಕಾವೇರಿ ತೀರ್ಥೋದ್ಭವ ಹಿನ್ನೆಲೆ ವಿರಾಜಪೇಟೆಯಿಂದ ತಲಕಾವೇರಿವರೆಗೆ ಸುಮಾರು ೫೮ ಕಿಮೀವರೆಗೆ ಆರು ಯುವಕರು ಹಾಗೂ ಓರ್ವ ಯುವತಿ ೪ನೇ ವರ್ಷದ ಕಾವೇರಿ ಪಾದಯಾತ್ರೆ ಮಾಡಿದರು.
ಕಾವೇರಿ ತೀರ್ಥೋದ್ಭವ ಹಿನ್ನೆಲೆ ಬುಧವಾರ ಮುಂಜಾನೆಯಿಂದಲೇ ವಿರಾಜಪೇಟೆಯಿಂದ ಪಾದಯಾತ್ರೆ ಕೈಗೊಂಡಿದ್ದರು. ವಿರಾಜಪೇಟೆ, ಕದನೂರು, ಕಡಂಗ, ನಾಪೋಕ್ಲು, ಬಲ್ಲಮಾವಟೀ, ಅಯ್ಯಂಗೇರಿ ಮೂಲಕ ಭಾಗಮಂಡಲಕ್ಕೆ ಬುಧವಾರ ಸಂಜೆ ೬:೩೦ ಗಂಟೆಗೆ ತಲುಪಿದ ಇವರು ಗುರುವಾರ ಭಾಗಮಂಡಲದ ಶ್ರೀ ಭಗಂಡೇಶ್ವರ ಸನ್ನಿದಿಯಿಂದ ಹಲವು ಸಂಘಟನೆಯೊಂದಿಗೆ ಕಾವೇರಿ ಭಜನೆಯ ಮೂಲಕ ಪಾದಯಾತ್ರೆ ಮುಂದುವರಿಸಿ ತೀರ್ಥೋದ್ಭವ ಮುನ್ನ ತಲಕಾವೇರಿಗೆ ತಲುಪಿದರು.
ಕಾವೇರಿಯ ಪವಿತ್ರ ತೀರ್ಥವನ್ನು ಪಡೆದು ಹಲವೆಡೆ ತೀರ್ಥ ಪ್ರಸಾದವನ್ನು ವಿತರಿಸಿದರು. ಕಾವೇರಿ ಮಾತೆಯ ಭಕ್ತಾದಿಗಳಾಗಿರುವ ಚೇಟ್ಟೊಳಿರ ಶರತ್ ಸೋಮಣ್ಣ, ಮುರುವಂಡ ಸಾವನ್ ಸೋಮಣ್ಣ, ಕಾಳಮಂಡ ರಾಬಿನ್ ಅಚ್ಚಮ್ಮ, ಮುಕ್ಕಾಟಿರ ಉತ್ತಪ್ಪ, ಅವರುಗಳನ್ನು ಒಳಗೊಂಡ ತಂಡದಲ್ಲಿ ವಿಶೇಷವಾಗಿ ಯುವತಿಯಾದ ಮುರುವಂಡ ಸ್ಪೂರ್ತಿ ಸೀತಮ್ಮ ಈ ಬಾರಿಯ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ನಾಪೋಕ್ಕುಯಿಂದ ಪೊರುಕೊಂಡ ಶಾನ್ ನಾಣಯ್ಯ ಇವರೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡು ತಾಯಿ ಕಾವೇರಿಯ ಆಶೀರ್ವಾದ ಪಡೆದರು.