

ಜಗಳೂರು: ಕಾಲು ಬಾಯಿ ರೋಗ ಸಾಂಕ್ರಮಿಕ ವೈರಲ್ ರೋಗವಾಗಿದ್ದು, ಅದು ಜಾನುವಾರು, ಕುರಿ ಮತ್ತು ಹಂದಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಹೇಳಿದರು.
ತಾಲೂಕಿನ ಗೊಲ್ಲರಹಟ್ಟಿಯಲ್ಲಿ ಮಂಗಳವಾರ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಕಾಲುಬಾಯಿ ರೋಗ ಲಸಿಕಾ ಅಭಿಯಾನ, ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ 4ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಲಚರ, ಪ್ರಾಣಿ, ಪಕ್ಷಿಗಳಿಗೂ ಮನುಷ್ಯರಂತೆ ವಿವಿಧ ರೋಗ ಹರಡುತ್ತವೆ. ಅವುಗಳನ್ನು ಚಿಕಿತ್ಸೆ ಮೂಲಕ ದೂರ ಮಾಡುವ ಶಕ್ತಿ ವೈದ್ಯರಿಗಿದೆ. ಈ ರೋಗದಿಂದ ಸಾಕಷ್ಟು ಜಾನುವಾರು ಮೃತಪಟ್ಟಿವೆ. ಸಾವಿನ ಸಂಖ್ಯೆ ತಪ್ಪಿಸುವ ಉದ್ದೇಶದಿಂದ ಸರ್ಕಾರ ಪ್ರತಿ ವರ್ಷ ಅಭಿಯಾನ ನಡೆಸುತ್ತಿದೆ. ರೈತರು ಜಾಗೃತರಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡಿಸಬೇಕು ಎಂದು ಸಲಹೆ ನೀಡಿದರು.
2005ರ ಗಣತಿಯಂತೆ ತಾಲೂಕಿನಲ್ಲಿ 42 ಸಾವಿರ ಎತ್ತು, ಎಮ್ಮೆಗಳಿವೆ. ರೋಗಗ್ರಸ್ತ ರಾಸುಗಳಿಂದ ಇನ್ನೊಂದು ರಾಸುವಿಗೆ ನೇರ ಸಂಪರ್ಕ, ಗಾಳಿ, ನೀರು, ಆಹಾರ ಮೂಲಕ ಹರಡುತ್ತದೆ. ಹೀಗಾಗಿ, ರೈತರು ತಮ್ಮ ಜಾನುವಾರುಗಳನ್ನು ಕಾಲುಬಾಯಿ ರೋಗ ಮುಕ್ತಗೊಳಿಸಿಕೊಳ್ಳಲು ಲಸಿಕೆ ಹಾಕಿಸಿಕೊಳ್ಳಬೇಕು ಎಂದರು.
ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಬಿ. ಲಿಂಗರಾಜು ಮಾತನಾಡಿ, ರೋಗ ಹರಡದಂತೆ ಮುಂಜಾಗ್ರತ ಕ್ರಮಕೈಗೊಳ್ಳಲಾಗಿದೆ. ಅಣಬೂರು, ಬಿಳಿಚೋಡು, ಜಗಳೂರು ಗೊಲ್ಲರಹಟ್ಟಿ, ಅಗಸನಹಳ್ಳಿ, ಬಸವಾಪುರದಲ್ಲಿ ರಾಸುಗಳಿಗೆ ಲಸಿಕೆ ಹಾಕಲಾಗುತ್ತಿದೆ ಎಂದರು.
ಸೆ.26ರಿಂದ ಅಕ್ಟೋಬರ್ 25ರ ವರೆಗೆ ನಿರಂತರವಾಗಿ ಲಸಿಕೆ ಹಾಕುವ ತಯಾರಿ ಮಾಡಿಕೊಳ್ಳಲಾಗಿದೆ. ಕಾಲುಬಾಯಿ ಜ್ವರಕ್ಕೆ ತುತ್ತಾದ ರಾಸುಗಳಲ್ಲಿ ಹಾಲಿನ ಉತ್ಪಾದನೆ ಕಡಿಮೆಯಾಗುತ್ತದೆ. ಗರ್ಭಧಾರಣೆ ಅವಕಾಶವೂ ಕಡಿಮೆ, ನಾಟಿ ತಳಿ ಎತ್ತುಗಳಲ್ಲಿ ಉಳುಮೆ ಮಾಡುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಹೀಗಾಗಿ, ಎಲ್ಲ ರೈತರು ತಮ್ಮ ರಾಸುಗಳಿಗೆ ತಪ್ಪದೇ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕೆಎಂಎಫ್ ವಿಸ್ತರಣಾಧಿಕಾರಿ ರಶ್ಮಿ, ಹಿರಿಯ ಪಶುವೈದ್ಯ ಪರೀಕ್ಷಕ ಕೆ.ಎಸ್. ಶಾಂತಕುಮಾರ್, ವಿಸ್ತರಣಾಧಿಕಾರಿ ರಾಮಚಂದ್ರಪ್ಪ, ಜಾನುವಾರು ಅಭಿವೃದ್ಧಿ ಅಧಿಕಾರಿ ಷಡಾಕ್ಷರಿ, ಕಿರಿಯ ಪಶುವೈದ್ಯಕೀಯ ಪರೀಕ್ಷಕ ರಾಜಭಕ್ಷಿ, ರಮೇಶ್, ವಿಶ್ವನಾಥ್, ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ, ಕಾಂಗ್ರೆಸ್ ಮುಖಂಡರಾದ ಗೌಸ್ ಅಹಮದ್, ಪಲ್ಲಾಗಟ್ಟೆ ಶೇಖರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಷೀರ್ ಅಹಮದ್, ಕಾನನಕಟ್ಟೆ ಪ್ರಭು ಉಪಸ್ಥಿತರಿದ್ದರು.