

ಮಂಗಳೂರು: ಕರಾವಳಿಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪರಿಸ್ಥಿತಿ ನಿಯಂತ್ರಣ ಮೀರುತ್ತಿದೆಯೇ ಎಂಬ ಅನುಮಾನ ಜನರನ್ನು ಕಾಡತೊಡಗಿದೆ. ಇನ್ನೊಂದೆಡೆ ವೈದ್ಯರು ಮತ್ತು ಕರೊನಾ ಸೇನಾನಿಗಳು ಕೂಡ ಕೋವಿಡ್ ಸೋಂಕಿಗೆ ಒಳಗಾಗುತ್ತಿದ್ದರೆ, ಇನ್ನೊಂದೆಡೆ ಸೀಲ್‌ಡೌನ್ ಆಗುತ್ತಿರುವ ಮನೆಗಳ ಸಂಖ್ಯೆಯೂ ಏರುತ್ತಲೇ ಇರುವುದರಿಂದ ಜನರ ಆತಂತ ಇಮ್ಮಡಿಯಾಗಿದೆ.
ದ.ಕ. ಜಿಲ್ಲೆಯಲ್ಲಿ ಶುಕ್ರವಾರ ಸೋಂಕಿನ 49 ಹೊಸ ಪ್ರಕರಣಗಳು ಪತ್ತೆಯಾಗಿವೆ. ಸೋಂಕಿತರಲ್ಲಿ ಖಾಸಗಿ ಆಸ್ಪತ್ರೆಯ ಇಬ್ಬರು ವೈದ್ಯರು ಕೂಡ ಇದ್ದಾರೆ. ಪ್ರಾಥಮಿಕ ಸಂಪರ್ಕ ಇಲ್ಲದವರಲ್ಲೂ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ, ಸೋಂಕು ಸಮುದಾಯಕ್ಕೆ ಹರಡುವ ಸಾಧ್ಯತೆಯ ಆತಂಕದ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಒಂದೇ ಕುಟುಂಬದ 17 ಮಂದಿಯಲ್ಲಿ ಪಾಸಿಟಿವ್ ಪ್ರಕರಣ ಕಾಣಿಸಿಕೊಂಡ ಉಳ್ಳಾಲದಲ್ಲಿ ಹಾಗೂ ಬೆಳ್ತಂಗಡಿಯಲ್ಲಿ ಪರಿಸ್ಥಿತಿ ಕೈ ಮೀರುತ್ತಿರುವುದಾಗಿ ಇಲಾಖೆಯ ಹಿರಿಯ ವೈದ್ಯಾಧಿಕಾರಿಯೊಬ್ಬರು ವಿಜಯವಾಣಿಗೆ ತಿಳಿಸಿದ್ದಾರೆ. ಮಾರುಕಟ್ಟೆ, ಮಾಲ್, ಪೆಟ್ರೋಲ್ ಪಂಪ್ ಸಹಿತ ಸಾರ್ವಜನಿಕರ ಸಂಪರ್ಕ ಅಧಿಕ ಇರುವ ಪ್ರದೇಶಗಳಲ್ಲಿ ರ‌್ಯಾಂಡಮ್ ಆಗಿ ವೈದ್ಯಕೀಯ ಪರೀಕ್ಷೆಗಳನ್ನು ಆರಂಭಿಸಲಾಗಿದೆ. ಸೋಂಕು ಪತ್ತೆ ವೈದ್ಯಕೀಯ ಪರೀಕ್ಷೆಗಳು ಹೆಚ್ಚಳಗೊಂಡಿವೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.
ಚಿನ್ನಾಭರಣ ಮಳಿಗೆ ಸೀಲ್‌ಡೌನ್
ಸೀಲ್‌ಡೌನ್ ಆಗಿರುವ ಪ್ರದೇಶಗಳು ಗಮನಾರ್ಹ ಸಂಖ್ಯೆಯಲ್ಲಿ ಹೆಚ್ಚಳವಾಗಿವೆ. ನಿಖರ ಅಧಿಕೃತ ಅಂಕಿಅಂಶ ಲಭ್ಯವಾಗಿಲ್ಲ. ನಗರ ನಡುವಿನ ಸ್ವರ್ಣಾಭರಣ ಮಳಿಗೆಯೊಂದು ಶನಿವಾರ ಸೀಲ್‌ಡೌನ್ ಆಗಿದೆ. ಜಿಲ್ಲೆಯಲ್ಲಿ ಶನಿವಾರ ಸೋಂಕು ಪತ್ತೆಯಾದ ಪ್ರಕರಣಗಳಲ್ಲಿ 14 ಮಂದಿ ಸೌದಿ ಅರೇಬಿಯಾ, ದಮಾಮ್, ದುಬಾಯಿ, ಶಾರ್ಜಾ ಹಾಗೂ ಕತಾರ್‌ನಿಂದ ಆಗಮಿಸಿದವರು. 3 ಐಎಲ್‌ಐ, ನಾಲ್ಕು ‘ಸಾರಿ’ ಪ್ರಕರಣಗಳು. ಆರು ಪ್ರಕರಣಗಳಲ್ಲಿ ಶೋಧ ಕಾರ್ಯ ಮುಂದುವರಿದಿದ್ದು, 22 ಮಂದಿ ಪ್ರಾಥಮಿಕ ಸಂಪರ್ಕ ಹೊಂದಿದವರು.
65 ಮತ್ತು 57 ವರ್ಷದ ಇಬ್ಬರು ಗಂಡಸರ ಪ್ರಾಥಮಿಕ ಸಂಪರ್ಕ ಶೋಧ ಮುಂದುವರಿದಿದೆ. ಕೋವಿಡ್‌ಆಸ್ಪತ್ರೆಯಲ್ಲಿ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುವ ಐವರು ಡಯಾಬಿಟೀಸ್, ನ್ಯುಮೋನಿಯಾ, ಹೃದ್ರೋಗ, ಲಿವರ್ ಸಂಬಂಧಿ ತೊಂದರೆಗಳಿಂದ ಬಳಲುತ್ತಿದ್ದಾರೆ.
ಇಬ್ಬರು ಬಾಣಂತಿಯರಿಗೆ ಸೋಂಕು
ನಗರದ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಇಬ್ಬರು ಬಾಣಂತಿಯರು ಮತ್ತು ಓರ್ವ ಮೆಡಿಕಲ್ ಇಂಟರ್ನಿಯಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ. ಮಹಿಳೆಗೆ ಆಸ್ಪತ್ರೆಗೆ ಬರುವ ಮೊದಲೇ ಸೋಂಕಿತ್ತು ಸೇರಿಕೊಂಡಿತ್ತು ಎನ್ನಲಾಗಿದೆ.
ಪುತ್ತೂರಿನಲ್ಲಿ ಐವರಿಗೆ ದೃಢ
ಪುತ್ತೂರು/ಬಂಟ್ವಾಳ/ಬೆಳ್ತಂಗಡಿ: ತಾಲೂಕಿನಲ್ಲಿ ಶನಿವಾರ 5 ಕರೊನಾ ಪಾಸಿಟಿವ್ ಪ್ರಕಣಗಳು ದೃಢಪಟ್ಟಿವೆ. ನಗರಸಭಾ ವ್ಯಾಪ್ತಿಯ ಬಪ್ಪಳಿಗೆ ಮತ್ತು ಕೂರ್ನಡ್ಕ ನಿವಾಸಿಗಳಾದ ಇಬ್ಬರಿಗೆ ಹಾಗೂ ಪುತ್ತೂರು ಸರ್ಕಾರಿ ಆಸ್ಪತೆಯ ಡಿ ದರ್ಜೆ ನೌಕರೆಗೆ ಕರೊನಾ ಪಾಸಿಟಿವ್ ದೃಢಪಟ್ಟಿದೆ. ಗ್ರಾಮಾಂತರ ಪ್ರದೇಶವಾದ ಬಜತ್ತೂರು ಗ್ರಾಮದ ಕಾಂಚನದಲ್ಲಿ ಒಂದು ಪ್ರಕರಣ, ನರಿಮೊಗ್ರು ಗ್ರಾಪಂ ವ್ಯಾಪಿಯ ಶಾಂತಿಗೋಡು ಎಂಬಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ. ಶಾಂತಿಗೋಡು ಮತ್ತು ಬಜತ್ತೂರಿನಲ್ಲಿ ಕರೊನಾ ಪತ್ತೆಯಾದವರ ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ. ತಾಲೂಕಿನ ಈ ತನಕ ಒಟ್ಟು 10 ಪ್ರಕರಣಗಳು ಪತ್ತೆಯಾಗಿದ್ದು, ಐವರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ಬಂಟ್ವಾಳ ತಾಲೂಕಿನಲ್ಲಿ ಮತ್ತೆ ಮೂರು ಕರೊನಾ ಹೊಸ ಪ್ರಕರಣಗಳು ಪತ್ತೆಯಾಗಿವೆ. ಬಿ.ಕಸ್ಬಾ ಗ್ರಾಮದ ಲೊರೆಟ್ಟೋ ಸಮೀಪ, ಪುಣಚ ಮತ್ತು ಅನಂತಾಡಿ ಗ್ರಾಮದ ಮಹಿಳೆಯರಿಗೆ ಪಾಸಿಟಿವ್ ವರದಿ ಬಂದಿದ್ದು ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ.
ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಉದ್ಯೋಗಿಯಾಗಿರುವ ಮುಂಡಾಜೆಯ ಮಹಿಳೆಗೆ ಕರೊನಾ ಪಾಸಿಟಿವ್ ವರದಿ ಬಂದಿದೆ. ಅವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆಯ ಪತಿ ಮಂಡ್ಯ ಇನ್ನಿತರ ಕಡೆ ಸಂಚರಿಸಿದ್ದು, ಇದೇ ಸಂಪರ್ಕದಿಂದ ಬಂದಿರಬಹುದು ಎಂದು ಶಂಕಿಸಲಾಗಿದೆ. ಮಹಿಳೆಯ ಮನೆಯನ್ನು ಸೀಲ್‌ಡೌನ್ ಮಾಡಲಾಗಿದ್ದು, ಅವರು ನೌಕರಿ ಮಾಡುತ್ತಿದ್ದ ಸಂಸ್ಥೆಯನ್ನು ಎರಡು ದಿನ ಸೀಲ್‌ಡೌನ್ ಮಾಡಲು ಸೂಚಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಉಜಿರೆಯ ಪೆಟ್ರೋಲ್ ಬಂಕ್ ಸಿಬ್ಬಂದಿಗೂ ಸೋಂಕು ತಗುಲಿದ್ದು, ಬಂಕನ್ನು ಸೀಲ್‌ಡೌನ್ ಮಾಡಲಾಗಿದೆ.
ಕಾಸರಗೋಡಲ್ಲಿ 11 ಮಂದಿಗೆ ಸಂಪರ್ಕದಿಂದ ಸೋಂಕು
ಕಾಸರಗೋಡು: ಜಿಲ್ಲೆಯ 11 ಮಂದಿ ಸಹಿತ ಶನಿವಾರ ಕೇರಳದಲ್ಲಿ 195 ಮಂದಿಯಲ್ಲಿ ಕೋವಿಡ್-19 ಕಾಣಿಸಿಕೊಂಡಿದೆ. ಇವರಲ್ಲಿ 118 ಮಂದಿ ವಿದೇಶದಿಂದ, 62 ಮಂದಿ ಇತರ ರಾಜ್ಯಗಳಿಂದ ಆಗಮಿಸಿದವರಾಗಿದ್ದು, 15 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ.