

ಹುಬ್ಬಳ್ಳಿ : ನಾಗರಿಕರ ಸಮಸ್ಯೆಗಳನ್ನು ನೇರವಾಗಿ ಆಲಿಸಿ, ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಮೇಯರ್ ರಾಮಪ್ಪ ಬಡಿಗೇರ ಅವರು ಪ್ರಾರಂಭಿಸಿರುವ ‘ಮೇಯರ್ ಮಾತುಕತೆ : ನಿಮ್ಮ ನಗರ-ನಿಮ್ಮ ಧ್ವನಿ’ ಫೋನ್ ಇನ್ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಮೊದಲ ದಿನವೇ 49 ಜನರು ಕರೆ ಮಾಡಿ, ಸಮಸ್ಯೆ ಹೇಳಿಕೊಂಡಿದ್ದಾರೆ.
ಒಂದೂವರೆ ತಾಸಿನ ಫೋನ್ ಇನ್ ಕಾರ್ಯಕ್ರಮದಲ್ಲಿ ಹೆಚ್ಚಿನ ಕರೆಗಳು ಬಂದಿರುವುದು, ‘ಕಂಟ್ರೋಲ್ ರೂಮ್ೆ ಕರೆ ಮಾಡಿದರೂ ಯಾವುದೇ ಪ್ರಯೋಜನವಿಲ್ಲ. ನೀವಾದರೂ ಸಮಸ್ಯೆ ಪರಿಹರಿಸಿ..’ ಎಂಬ ದೂರುಗಳು.
ವಾರ್ಡ್ ನಂ. 4ರಲ್ಲಿ ನೀರು ಸರಬರಾಜು ಸಮರ್ಪಕವಾಗಿ ಇಲ್ಲ. ನೀರು ಬಂದರೂ ಒತ್ತಡರಹಿತವಾಗಿರುತ್ತದೆ. ಒಂದು ಕೊಡ ತುಂಬಬೇಕೆಂದರೆ ಒಂದು ತಾಸು ಬೇಕು. ಈ ಬಗ್ಗೆ ಕಳೆದ ಒಂದು ವರ್ಷದಿಂದ ದೂರು ನೀಡುತ್ತಿದ್ದರೂ ಪ್ರಯೋಜನವಾಗಿಲ್ಲ ಎಂಬ ಅಳಲು ತೋಡಿಕೊಂಡರು ಅಲ್ಲಿನ ನಿವಾಸಿ.
ಧಾರವಾಡದ 17ನೇ ವಾರ್ಡ್ನ ನಿವಾಸಿ, ಮಹಾನಗರ ಪಾಲಿಕೆ ನಿವೃತ್ತ ಅಧಿಕಾರಿಯೊಬ್ಬರು ತಮ್ಮ ಮನೆ ಸುತ್ತ ಇರುವ ಕಸ ತೆಗೆಯುವಂತೆ ಮೂರ್ನಾಲ್ಕು ತಿಂಗಳಿಂದ ಕಂಟ್ರೋಲ್ ರೂಮ್ೆ ಕರೆ ಮಾಡಿ, ದೂರು ನೀಡಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲವೆಂದು ಆರೋಪಿಸಿದರು.
ಇನ್ನು, ಬೀದಿದೀಪ ಬೆಳಗುತ್ತಿಲ್ಲ, ನಗರ ಹೊರಭಾಗದ ಹೊಸ ಬಡಾವಣೆಗಳಲ್ಲಿ ಸಮರ್ಪಕ ರಸ್ತೆಗಳಿಲ್ಲ, ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ ಎಂಬ ದೂರುಗಳು ಹೆಚ್ಚಿನ ಸಂಖ್ಯೆಯಲ್ಲಿ ಕೇಳಿಬಂದವು.
ಹೊರ ಬಡಾವಣೆಯೊಂದರಲ್ಲಿ ಪುಂಡರ ಕಾಟ ಹೆಚ್ಚಾಗಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಹುಬ್ಬಳ್ಳಿಯ ನಿವಾಸಿಯೊಬ್ಬರು ದೂರು ನೀಡಿದರು. ರವಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿವೆ ಎಂದು ಅಲ್ಲಿನ ಮಹಿಳೆಯೊಬ್ಬರು ಕರೆ ಮಾಡಿದ್ದರು. ಹೈಮಾಸ್ಟ್ ಕಂಬ ಅಳವಡಿಸಿ ಒಂದು ವರ್ಷವಾದರೂ, ಅದಕ್ಕೆ ಬಲ್ಬ್ ಕೂಡಿಸಿಲ್ಲ ಎಂಬುದು ಧಾರವಾಡದ 2ನೇ ವಾರ್ಡ್ ನಿವಾಸಿಯೊಬ್ಬರ ದೂರಾಗಿತ್ತು.
ಸರಿಯಾದ ಸಮಯಕ್ಕೆ ತೆರಿಗೆ ಪಾವತಿಸಿದರೂ ತೆರಿಗೆ ಬಾಕಿ ಎಂದು ತೋರಿಸಲಾಗುತ್ತಿದೆ ಎಂದು 20ನೇ ವಾರ್ಡ್ನ ನಿವಾಸಿಯೊಬ್ಬರು ಸಮಸ್ಯೆ ಹೇಳಿಕೊಂಡರು. ಮನೆಮನೆಯಿಂದ ತ್ಯಾಜ್ಯ ಸಂಗ್ರಹ ಸಮಯದಲ್ಲಿ ಒಣ ಹಾಗೂ ಹಸಿ ಕಸ ಪ್ರತ್ಯೇಕವಾಗಿಯೇ ಟಿಪ್ಪರ್ಗಳಿಗೆ ಹಾಕುವುದನ್ನು ಕಡ್ಡಾಯಗೊಳಿಸುವಂತೆ ನಾಗರಿಕರೊಬ್ಬರು ಸಲಹೆ ನೀಡಿದರು.
ಸಮಸ್ಯೆಗಳನ್ನು ಆಲಿಸಿದ ಮೇಯರ್ ರಾಮಪ್ಪ ಬಡಿಗೇರ, ನಿಗದಿತ ಸಮಯದೊಳಗೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ವಲಯ ಸಹಾಯಕ ಆಯುಕ್ತರು ಹಾಗೂ ಇನ್ನಿತರ ಅಧಿಕಾರಿಗಳು ಹಾಜರಿದ್ದರು.
ಅಧಿಕಾರಿಗಳ ನೇಮಕ: ಫೋನ್ ಇನ್ ಕಾರ್ಯಕ್ರಮಕ್ಕೆ ಕರೆ ಮಾಡಿ, ಸಮಸ್ಯೆ ಹೇಳಿಕೊಂಡವರ ಸಮಸ್ಯೆ ನಿವಾರಿಸುವುದಕ್ಕಾಗಿ ಪ್ರತ್ಯೇಕ ಇಬ್ಬರು ಅಧಿಕಾರಿಗಳನ್ನು ನೇಮಿಸುವುದಾಗಿ ಮೇಯರ್ ರಾಮಪ್ಪ ಬಡಿಗೇರ ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಮಸ್ಯೆ ಬಗೆಹರಿಸಿ ಅಗತ್ಯ ಸೌಲಭ್ಯ ಒದಗಿಸಲು ನಿರ್ಲಕ್ಷ್ಯ ತೋರುವ ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮನೆ ಮನೆಯಿಂದ ಕಸ ಸಂಗ್ರಹಕ್ಕೆ ಇನ್ನೂ 100 ಆಟೋ ಟಿಪ್ಪರ್ಗಳ ಅವಶ್ಯಕತೆ ಇದೆ ಎಂದು ತಿಳಿಸಿದ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಆನಂತರವಷ್ಟೇ ಹಸಿ ಹಾಗೂ ಒಣ ಕಸಗಳನ್ನು ಮನೆಯಿಂದಲೇ ಪ್ರತ್ಯೇಕಿಸಲು ಸಾಧ್ಯ ಎಂದರು.
ಸಮಸ್ಯೆಗಳ ನಿವಾರಣೆಗೆ ನೀಡಿದ ಗಡವು :
* ಯುಜಿಡಿ ಕವರ್ ಹಾಕಲು, ಚರಂಡಿ ತುಂಬಿ ಹರಿಯುವ ಸಮಸ್ಯೆ ನಿವಾರಣೆಗೆ 24 ತಾಸು.
* ಒಳಚರಂಡಿ ಪೂರ್ತಿ ಹದಗೆಟ್ಟಿದ್ದರೆ ದುರಸ್ತಿಗೊಳಿಸಲು 1 ತಿಂಗಳು.
* ಸತ್ತಿರುವ ಪ್ರಾಣಿಗಳ ಸ್ಥಳಾಂತರಕ್ಕೆ 24 ತಾಸು.
* ಹಂದಿ, ಬೀದಿ ನಾಯಿಗಳ ಸ್ಥಳಾಂತರಕ್ಕೆ 7 ದಿನ.
* ಹೊಸ ರಸ್ತೆಗಳ ನಿರ್ವಣವನ್ನು ಬಜೆಟ್ ಆಧರಿಸಿ ಕೈಗೊಳ್ಳಲಾಗುವುದು.