483 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ

h8-neha hiremath
Published on

ಹುಬ್ಬಳ್ಳಿ: ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯ ನಿರಂಜನಯ್ಯ ಹಿರೇಮಠ ಪುತ್ರಿ ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಸಿಐಡಿ ಅಧಿಕಾರಿಗಳು, ಸೋಮವಾರ ಇಲ್ಲಿಯ ಒಂದೇ ಹೆಚ್ಚುವರಿ ದಿವಾಣಿ ನ್ಯಾಯಾಲಯ ಮತ್ತು 3ನೇ ಜೆಎಂಎಫ್‌ಸಿ ಕೋರ್ಟ್‌ಗೆ 483 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಪ್ರತಿಷ್ಠಿತ ಕಾಲೇಜ್‌ನಲ್ಲಿ ಓದುತ್ತಿದ್ದ ನೇಹಾ ಹಿರೇಮಠ ಅವರ ಸಹಪಾಠಿ ಸವದತ್ತಿ ಮೂಲದ ಫಯಾಜ್ ಎಂಬಾತ ಚಾಕುವಿನಿಂದ ಇರಿದು ಏ. 18ರಂದು ಕೊಲೆ ಮಾಡಿದ್ದ. ಫಯಾಜ್ ಪ್ರೀತಿಯನ್ನು ನೇಹಾ ನಿರಾಕರಿಸಿದ್ದರು. ಇದರಿಂದ ಕುಪಿತಗೊಂಡಿದ್ದ ಫಯಾಜ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದರ ಕುರಿತು ಸಿಐಡಿ ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದ. ಈ ಕುರಿತು ವಿದ್ಯಾನಗರ ಠಾಣೆಲ್ಲಿಪ್ರಕರಣ ದಾಖಲಾಗಿತ್ತು. ನೇಹಾ ಕೊಲೆ ಖಂಡಿಸಿ ದೇಶಾದ್ಯಂತ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ವಿವಿಧ ಸಂಘಟನೆಗಳು ಫಯಾಜ್‌ನನ್ನು ಎನ್‌ಕೌಂಟರ್ ಮಾಡಬೇಕು ಇಲ್ಲವೇ ಗಲ್ಲಿಗೇರಿಸಬೇಕೆಂದು ಪ್ರತಿಭಟಿಸಿದ್ದವು.
ಪ್ರಕರಣವನ್ನು ಸಿಐಡಿ ಇಲ್ಲವೇ ಸಿಬಿಐಗೆ ವಹಿಸಬೇಕೆಂದು ಬಿಜೆಪಿ ಹಾಗೂ ನೇಹಾ ತಂದೆ ನಿರಂಜನಯ್ಯ ಸರ್ಕಾರವನ್ನು ಒತ್ತಾಯಿಸಿದ್ದರು. ಕೂಡಲೇ ಎಚ್ಚೆತ್ತ ಸರ್ಕಾರವು ಈ ಪ್ರಕರಣವನ್ನು ಸಿಐಡಿಗೆ ವಹಿಸಿತು. ಸಿಐಡಿ ಎಸ್‌ಪಿ ಎನ್. ವೆಂಕಟೇಶ ನೇತೃತವದಲ್ಲಿ ಸುಮಾರು 2 ತಿಂಗಳು 20 ದಿನಗಳವರೆಗೆ ತನಿಖೆ ನಡೆಸಿದ್ದು, ಸಿಐಡಿ ಡಿವೈಎಸ್‌ಪಿ ಎನ್.ಎಚ್. ಪೈಕ್ ಅವರು ಸೋಮವಾರ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
ಫಯಾಜ್‌ಗೆ ಕಠಿಣ ಶಿಕ್ಷೆ ಖಚಿತ
ಏ. 18ರಂದು ನೇಹಾ ಹತ್ಯೆ ಮಾಡಿದ್ದ ಹಂತಕ ಫಯಾಜ್ ಕೈಗೆ ಕೂಡ ಪೆಟ್ಟು ಬಿದ್ದಿತ್ತು. ಚಾಕುವಿನಿಂದ ಇರಿಯುವ ವೇಳೆ ಫಯಾಜ್ ರಕ್ತ ನೇಹಾ ಬಟ್ಟೆ ಮೇಲೆ ಹರಡಿತ್ತು. ಇದರಿಂದ ಸಿಐಡಿ ಅಧಿಕಾರಿಗಳು ಎರಡು ರಕ್ತದ ಮಾದರಿ ಪತ್ತೆಗೆ ಕೋರ್ಟ್‌ನಲ್ಲಿಯೇ ಡಿಎನ್‌ಎ ಪರೀಕ್ಷೆ ಮಾಡಿಸಿದ್ದರು. ಎರಡೂ ರಕ್ತದ ಗುರುತುಗಳು ಫಯಾಜ್‌ನದ್ದೇ ಎಂಬುದು ವಿಧಿವಿಜ್ಞಾನ ಪ್ರಯೋಗಾಲಯ ದೃಢಪಡಿಸಿದೆ. ಹಾಗಾಗಿ ಫಯಾಜ್‌ಗೆ ಕಠಿಣ ಶಿಕ್ಷೆ ಆಗುವುದು ಖಚಿತ ಎನ್ನುತ್ತಾರೆ ಸಿಐಡಿ ಹಿರಿಯ ಅಧಿಕಾರಿಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net