48 ಕುಶಲಕರ್ಮಿಗಳಿಗೆ ಸಿಕ್ತು ನೌಕರಿ

ITI
Published on

ಬೀದರ್: ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಮತ್ತು ಕ್ವೆಸ್ಟ್ ಅಲೈನ್ಸ್ ವತಿಯಿಂದ ಇಲ್ಲಿನ ಐಟಿಐನಲ್ಲಿ ರಾಷ್ಟ್ರೀಯ ಯುವ ಸಪ್ತಾಹ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಉದ್ಯೋಗ ಮೇಳದಲ್ಲಿ 48 ಕುಶಲಕರ್ಮಿಗಳಿಗೆ ನೌಕರಿ ಸಿಕ್ಕಿದೆ.

ಜಿಲ್ಲೆ ಸೇರಿದಂತೆ ವಿವಿಧೆಡೆಯಿಂದ ಐಟಿಐ ಹಾಗೂ ಡಿಪ್ಲೊಮಾ ಪದವೀಧರರು ಸಂದರ್ಶನಕ್ಕೆ ಆಗಮಿಸಿದ್ದರು. ವಿವಿಧ ಪರೀಕ್ಷೆಗಳ ನಂತರ ಅಂತಿಮವಾಗಿ ನಾನಾ ಕಂಪನಿಗಳಿಗೆ 40 ಐಟಿಐ ಕುಶಲಕರ್ಮಿ ಮತ್ತು 8 ಡಿಪ್ಲೊಮಾ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಮೇಳಕ್ಕೆ ಚಾಲನೆ ನೀಡಿದ ನೆಹರು ಯುವ ಕೇಂದ್ರ ಜಿಲ್ಲಾ ಸಮನ್ವಯಾಧಿಕಾರಿ ಮಯೂರಕುಮಾರ ಕೈಲಾಶ ಮಾತನಾಡಿ, ಸ್ವಾಮಿ ವಿವೇಕಾನಂದರು ಯುವಕರಿಗೆ ಶಕ್ತಿಯಾಗಿದ್ದಾರೆ. ನಮ್ಮಲ್ಲಿ ಕೌಶಲತೆ ಇದ್ದಾಗ ನೌಕರಿಗಾಗಿ ಹೆಣಗಾಡುವುದು ಬೇಡ. ಏನೇ ಬಂದರೂ ಧೈರ್ಯದಿಂದ ಜೀವನ ಸಾಗಿಸುವೆ ಎನ್ನುವ ಛಲ ಇರಬೇಕು ಎಂದರು.

ಹೈದರಾಬಾದ್ ಜಾನ್ಸನ್ ಲಿಫ್ಟನ್ ಕಂಪನಿ ವ್ಯವಸ್ಥಾಪಕ ಕಬಿಲ್ದೇವ ಮಾತನಾಡಿ, ಆಯ್ಕೆಯಾದವರಿಗೆ ಮೊದಲ ವರ್ಷ 12 ಸಾವಿರ ರೂ. ಮಾಸಿಕ ವೇತನ ಹಾಗೂ 8 ಗಂಟೆ ನಂತರ ಕೆಲಸ ಮಾಡಿದರೆ ಅದಕ್ಕೂ ಹೆಚ್ಚಿನ ವೇತನ ಕೊಡಲಾಗುವುದು. ತರಬೇತಿ ಬಳಿಕ ಕಾಯಂ ಮಾಡಲಾಗುವುದು ಎಂದರು. ಕಂಪನಿ ಮಾನವ ಸಂಪನ್ಮೂಲ ಅಧಿಕಾರಿ ಕಾಂತಾರಾಜ ಅವರು ಸಂದರ್ಶನ ನಡೆಸಿ 18 ಕುಶಲಕರ್ಮಿಗಳ ಆಯ್ಕೆ ಪ್ರಕಟಿಸಿದರು.

ಹೈದರಾಬಾದ್ ಪಿಎಂಎಫ್ ಇಂಜಿನಿಯರಿಂಗ್ ಕಂಪನಿ ಮ್ಯಾನೇಜರ್ ಎಂ.ಮಧು ಅವರು 4 ಕುಶಲಕರ್ಮಿಗೆ ಆಯ್ಕೆ ಮಾಡಿದರು. ಬೆಂಗಳೂರಿನ ಆಟೋ ಲೈವ್ ಹಾಗೂ ಓರಿಯೆಂಟಲ್ ಬೆಲ್ ಕಾರ್ಖಾನೆ ಮಾನವ ಸಂಪನ್ಮೂಲ ಅಧಿಕಾರಿ ಮುರಳಿನಾಥ, ಗಂಗರಾಜ ಸಂದರ್ಶನ ನಡೆಸಿ 8 ಕುಶಲಕರ್ಮಿಗಳಿಗೆ ಆಯ್ಕೆ ಮಾಡಿದರು. ಕಲಬುರಗಿಯ ಭಾರತ ಫೈನಾನ್ಸಿಯಲ್ ವ್ಯವಸ್ಥಾಪಕ ಗಣಪತಿ ಅವರು ಮೇಳದಲ್ಲಿ 4 ತರಬೇತಿದಾರರಿಗೆ ನೌಕರಿ ಪತ್ರ ನೀಡಿದರು.

ಕ್ವೆಸ್ಟ್ ಅಲೈನ್ಸ್ ಉದ್ಯೋಗ ಅಧಿಕಾರಿ ಮನೋಹರರಾಜ, ಐಟಿಐ ಪ್ರಾಚಾರ್ಯ ಶಿವಶಂಕರ ಟೋಕರೆ ಇತರರಿದ್ದರು. ಜೆ.ಬಸವರಾಜ ಸ್ವಾಗತಿಸಿದರು. ಬಾಬು ಪ್ರಭಾಜಿ ನಿರೂಪಣೆ ಮಾಡಿದರು. ಯುಸೂಫ್ ಮಿಯ್ಯಾ ಜೋಜನಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net