

ಕಾರವಾರ: ರಾಜ್ಯದಲ್ಲಿ 48 ಲಕ್ಷ ಕೃಷಿ ಹಿಡುವಳಿಗಳು ಮೃತರ ಹೆಸರಿನಲ್ಲಿರುವುದು ಕಂಡುಬAದಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ 4.10 ಕೋಟಿ ಖಾಸಗಿ ಕೃಷಿ ಜಮೀನುಗಳ ಪಹಣಿಗೆ ಆಧಾರ ಜೋಡಣೆ ಮಾಡುವ ಕಾರ್ಯವನ್ನು ಶೇ. 85 ರಷ್ಟು ಮುಗಿಸಲಾಗಿದೆ. ಆ ಸಂದರ್ಬದಲ್ಲಿ ಹಲವರು ಕೃಷಿ ಜಮೀನನ್ನು ಬೇರೆ ಉದ್ದೇಶಕ್ಕೆ ಬಳಸುತ್ತಿರುವುದು ಕಂಡುಬಂದಿದೆ. ಮುಖ್ಯವಾಗಿ ಮೃತರ ಹೆಸರಿನಲ್ಲೇ ಜಮೀನಿದ್ದು, ಅದು ಸಂಬಂಧಪಟ್ಟ ವಾರಸುದಾರರ ಹೆಸರಿಗೆ ವಾರ್ಸಾ ಆಗದೇ ಇರುವುದು ಕಂಡುಬಂದಿದೆ. ಅದನ್ನು ಸರಿ ಮಾಡಲು ಶೀಘ್ರದಲ್ಲಿ ಫೌತಿ ಖಾತೆ ಅಭಿಯಾನ ಪ್ರಾರಂಭಿಸಲಿದ್ದೇವೆ ಎಂದರು.
ಕಂದಾಯ ಇಲಾಖೆಯ ಹಳೆಯ ಸಮಸ್ಯೆಗಳನ್ನು ಬಗೆಹರಿಸಿ, ಬದಲಾವಣೆಯತ್ತ ಇಲಾಖೆಯನ್ನು ಕೊಂಡೊಯ್ಯುವ ಪ್ರಯತ್ನ ಮಾಡುತ್ತಿದ್ದೇವೆ. ತಹಸೀಲ್ದಾರ್ ನ್ಯಾಯಾಲಯಗಳಲ್ಲಿ 3 ತಿಂಗಳ ಒಳಗೆ ಹಾಗೂ ಎಸಿ ನ್ಯಾಯಾಲಯಗಳಲ್ಲಿ 6 ತಿಂಗಳ ಒಳಗೆ ಬಾಕಿ ಪ್ರಕರಣಗಳನ್ನು ವಿಚಾರಣೆ ಮಾಡಿ ಮುಗಿಸಲು ಸೂಚಿಸಲಾಗಿದೆ.
ಸರ್ಕಾರಿ ಜಮೀನು ಮಂಜೂರಾಗಿ ಅವುಗಳ ದುರಸ್ತಿ ಪೋಡಿ ಆಗದೇ ಹಲವು ವರ್ಷಗಳಿಂದ ತೊಂದರೆಪಡುತ್ತಿರುವ ರೈತರಿದ್ದಾರೆ. ಅದನ್ನು ಸರಿ ಮಾಡಲು 1 ಟು 5 ಅಭಿಯಾನ ಮಾಡಲು ಕ್ರಮ ವಹಿಸಲಾಗಿದೆ. ರಾಜ್ಯದಲ್ಲಿ 34 ಎಡಿಎಲ್ಆರ್ , 364 ಸರ್ಕಾರಿ ಸರ್ವೇಯರ್ಗಳ ಭರ್ತಿ ಕಾರ್ಯ ನಡೆದಿದೆ. 1191 ಲೈಸನ್ಸ್ ಸರ್ವೆಯರ್ಗಳ ನೇಮಕಾತಿ ಮಾಡಲಾಗಿದೆ ಎಂದರು.