

ವಿಜಯವಾಣಿ ಸುದ್ದಿಜಾಲ ಸರ್ಜಾಪುರ
ಸರ್ಜಾಪುರ ರೇಷ್ಮೆ ಬೆಳೆಗಾರರು ಹಾಗೂ ರೈತರ ಸೇವಾ ಸಹಕಾರ ಸಂಘ 2022-23ನೇ ಸಾಲಿನಲ್ಲಿ 2.54 ಕೋಟಿ ರೂ. ನಿವ್ವಳ ಲಾಭಗಳಿಸಿದ್ದು, ಸಂಘದ ಪ್ರತಿ ಷೇರುದಾರರಿಗೆ ಶೇ.18 ಲಾಭ ನೀಡಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಎಸ್.ಆರ್.ಗೋಪಾಲರೆಡ್ಡಿ ತಿಳಿಸಿದರು.
ಪಟ್ಟಣದ ಖಾಸಗಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಂಘದ 47ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು.
ಸಂಘ 1976ರಲ್ಲಿ ಸ್ಥಾಪನೆಯಾಗಿದ್ದು, 66 ಹಳ್ಳಿಗಳು ಈ ಸಂಘದ ವ್ಯಾಪ್ತಿಯಲ್ಲಿವೆ. ರೈತರು ಇದ್ದಲ್ಲೇ ಸಂಘದ ಸೇವೆ ಸಿಗಬೇಕು ಎಂಬ ಕಲ್ಪನೆಯಲ್ಲಿ ಈಗಾಗಲೇ ಸರ್ಜಾಪುರ, ದೊಮ್ಮಸಂದ್ರ, ಮುತ್ತಾನಲ್ಲೂರು, ಮುಗಳೂರಲ್ಲಿ ಸಂಘದ ಶಾಖೆ ಸೇವೆ ನೀಡುತ್ತಿದೆ ಎಂದರು.
ನೆರಿಗಾದಲ್ಲಿ ಇನ್ನೊಂದು ಶಾಖೆಯನ್ನು ಆರಂಭ ಮಾಡಲು ತಯಾರಿ ನಡೆಸಲಾಗುತ್ತಿದೆ. ಬಡ ಜನರಿಗೆ ಅನುಕೂಲವಾಗಬೇಕು ಎಂಬ ದೃಷ್ಟಿಯಿಂದ ಮುಂದಿನ ತಿಂಗಳನಲ್ಲಿ ಜನೌಷಧ ಕೇಂದ್ರ ಆರಂಭಿಸಲಾಗುವುದು. ಹಾಗೆಯೇ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ 150ಕ್ಕೂ ಹೆಚ್ಚು ಪ್ರತಿಭಾನ್ವಿತರನ್ನು ಸನ್ಮಾನಿಸಲಾಗಿದೆ ಎಂದರು.
ಸಂಘದ ಮಾಜಿ ಅಧ್ಯಕ್ಷ ವಿ.ಮುರಳಿ ಕೃಷ್ಣ ಮಾತನಾಡಿ, ಸಂಘವು ಸರ್ಕಾರದ ಬೆಳೆಸಾಲ, ಶೂನ್ಯ ಬಡ್ಡಿ ದರದ ಯೋಜನೆಯಡಿ 3 ಲಕ್ಷ ರೂ.ವರೆಗೆ ಬೆಳೆ ಸಾಲ, 10 ಲಕ್ಷ ರೂ.ವರೆಗೆ ಆಭರಣ ಸಾಲ ಹಾಗೂ 15 ಲಕ್ಷ ರೂ.ವರೆಗೆ ಕೃಷಿಯೇತರ ಉದ್ದೇಶಗಳಿಗಾಗಿ ಜಮೀನು ಅಡಮಾನ ಸಾಲ ನೀಡುತ್ತಿದೆ ಎಂದರು.
ಸದಸ್ಯರ ಹಾಗೂ ಗ್ರಾಹಕರ ಅನುಕೂಲಕ್ಕಾಗಿ ದೊಮ್ಮಸಂದ್ರ ಮತ್ತು ಮುತ್ತಾನಲ್ಲೂರು ಶಾಖೆಯಲ್ಲಿ ಸ್ೇ ಡೆಪೋಸಿಟ್ ಲಾಕರ್ ಸೌಲಭ್ಯ ಒದಗಿಸಲಾಗಿದ್ದು, ಸಂಘವು ಸಂಪೂರ್ಣವಾಗಿ ಗಣಕೀಕರಣಗೊಂಡಿದೆ ಎಂದರು.
ಪಿಇಎಸ್ ಯುನಿವರ್ಸಿಟಿ ಆಸ್ಪತ್ರೆಯಿಂದ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ಶಿಬಿರಕ್ಕೆ ವಿಧಾನ ಪರಿಷತ್ ಸದಸ್ಯರಾದ ದೊರೆಸ್ವಾಮಿ ನಾಯ್ಡು ಮತ್ತು ಆನೇಕಲ್ ಪಿಎಲ್‌ಡಿ ಬ್ಯಾಂಕಿನ ಮಾಜಿ ಅಧ್ಯಕ್ಷ ಆಂಜಿನಪ್ಪ ಚಾಲನೆ ನೀಡಿದರು.
ನಿರ್ದೇಶಕರಾದ ಮುತ್ತಾನಲ್ಲೂರು ವಿಶ್ವನಾಥ್ ರೆಡ್ಡಿ, ಎಸ್‌ವಿಟಿ ಮಂಜುನಾಥ್ ರೆಡ್ಡಿ, ನಂದಕುಮಾರ್, ರಾಮಸಾಗರ ಮಂಜುನಾಥ್, ಸಂಪಂಗಪ್ಪ, ಅಂಬರೀಶ್, ವೆಂಕಟೇಶ್, ಕಲಾ, ವಿನೋದ, ಕೆ.ವಿ.ಕೇಶವ, ನೌಕರ ಕೃಷ್ಣಮೂರ್ತಿ ಇತರರು ಇದ್ದರು.