

ತಾಂಬಾ: ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸುವಂತೆ ಗ್ರಾಮದಲ್ಲಿ ಸಂಗನಬಸವೇಶ್ವರ ವೃತ್ತದಲ್ಲಿ 477 ದಿನಗಳಿಂದ ನಡೆದ ಹೋರಾಟವು ಸಿಂದಗಿ ಶಾಸಕ ಅಶೋಕ ಮನಗೂಳಿ ಅವರು ಹೋರಾಟ ಸಮಿತಿ ಅಧ್ಯಕ್ಷ ಮಲ್ಲಯ್ಯ ಸಾರಂಗಮಠ ಅವರಿಗೆ ಸೋಮವಾರ ಹಣ್ಣಿನ ರಸ ಕುಡಿಸುವ ಮೂಲಕ ಅಂತ್ಯಗೊಂಡಿತು.
ಹೋರಾಟ ಸಮಿತಿ ಅಧ್ಯಕ್ಷ ಮಲ್ಲಯ್ಯ ಸಾರಂಗಮಠ ಮಾತನಾಡಿ, ಸಿಂದಗಿ ಶಾಸಕ ಅಶೋಕ ಮನಗೂಳಿ ನೇತೃತ್ವದಲ್ಲಿ ಬೃಹತ್ ನೀರಾವರಿ ಸಚಿವ, ಡಿಸಿಎಂ ಡಿ.ಕೆ. ಶಿವಕುಮಾರ ಅವರನ್ನು ಭೇಟಿಯಾದಾಗ ಸಚಿವರು ಇಂಡಿ ಏತ ನೀರಾವರಿಯ ಗುತ್ತಿ ಬಸವಣ್ಣ ಕಾಲುವೆಗೆ ಸ್ಕಾಡಾಗೇಟ್ ಅಳವಡಿಸಿ ಕೆಂಭಾವಿಯಲ್ಲಿ ಆರು ಮೋಟಾರು ಮೂಲಕ 147 ಕಿ.ಮೀ. ವರೆಗೆ ನೀರು ಹರಿಸಲು ಕೆಬಿಜೆಎನ್‌ಎಲ್ ಅಧಿಕಾರಿಗಳಿಗೆ ಆದೇಶ ನೀಡಿದ ಪ್ರಯುಕ್ತ ಹೋರಾಟ ಹಿಂಪಡೆಯಲಾಗಿದೆ ಎಂದರು.
ಅದಲ್ಲದೆ ವಿಜಯಪುರ ಜಿಲ್ಲೆಗೆ ಈ ಹಿಂದೆ ಉಸ್ತುವಾರಿ ಸಚಿವ ಉಮೇಶ ಕತ್ತಿ ಅವರು ಕಾಲುವೆ ಮೇಲೆ ಸ್ವತಃ ತಿರುಗಾಡಿ ಅಲ್ಲಿ ಹೂಳು ತೆಗೆಯಲು ಮತ್ತು ಮೋಟಾರ್‌ಗಳಿಗಾಗಿ 7.75 ಕೋಟಿ ಹಣ ಅನುದಾನ ನೀಡಿದ ಕಾರ್ಯ ಸ್ಮರಿಸಿದರು.
ಶಾಸಕ ಅಶೋಕ ಮನಗೂಳಿ ಮಾತನಾಡಿ, ಗುತ್ತಿ ಬಸವಣ್ಣ ಏತ ನೀರಾವರಿ ಕಾಮಗಾರಿ ಪ್ರಾರಂಭಿಸಲು ಎಂ.ಸಿ. ಮನಗೂಳಿ ಅವರು ಶಾಸಕರಿದ್ದಾಗ ಬರಿಗಾಲಿನಿಂದ ನಡೆಯುವ ಶಪಥ ಮಾಡಿದ್ದರು. ಆ ಪ್ರಯುಕ್ತ ಕೆಲಸ ಪ್ರಾರಂಭವಾಗಿ 97 ಕಿ.ಮೀ. ವರೆಗೆ ಮಾತ್ರ ನೀರು ಬರುತ್ತಿತ್ತು. ನಂತರ ಕಳೆದ 10 ವರ್ಷಗಳಿಂದ ನಡೆದ ಹೋರಾಟದ ಪ್ರಯುಕ್ತ ಈಗ ಕಾಲುವೆಗೆ ಸ್ಕಾಡಾ ಗೇಟ್ ಅಳವಡಿಸಿ ಆರು ಮೋಟಾರ್‌ಗಳ ಮೂಲಕ 147 ಕಿ.ಮೀ. ವರೆಗೆ ನೀರು ಹರಿಸಲು ನೀರಾವರಿ ಸಚಿವ ಡಿ.ಕೆ. ಶಿವಕುಮಾರ ಅವರು ಅಧಿಕಾರಿಗಳಿಗೆ ಆದೇಶ ನೀಡಿರುವುದಾಗಿ ತಿಳಿಸಿದ್ದಾರೆ ಎಂದರು.
ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ಎಸ್‌ಪಿ ಆನಂದ ಕುಮಾರ, ರಾಂಪುರ ಕೆಬಿಜೆಎನ್‌ಎಲ್ ಮುಖ್ಯ ಇಂಜಿನಿಯರ್ಸ್ ರವಿಶಂಕರ, ರವಿ ಚವ್ಹಾಣ ಮಾತನಾಡಿದರು.
ಹೋರಾಟ ಸಮಿತಿ ಅಧ್ಯಕ್ಷ ಮಲ್ಲಯ್ಯ ಸಾರಂಗಮಠ, ಶಾಸಕ ಅಶೋಕ ಮನಗೂಳಿ ಹಾಗೂ ಇತರರನ್ನು ಸನ್ಮಾನಿಸಲಾಯಿತು. ಕಂದಾಯ ಎಸಿ ರಾಮಚಂದ್ರ ಗಡದೆ, ತಹಸೀಲ್ದಾರ್ ನಾಗಯ್ಯ ಹಿರೇಮಠ, ಸಿಪಿಐ ಮಹಾದೇವ ಶಿರಹಟ್ಟಿ, ಎಸ್.ಎಂ. ಪಾಟೀಲ, ಮಹಾದೇವ ಮೂಲಿಮನಿ, ಚಂದ್ರಾಮ ಮೂಲಿಮನಿ, ಶರಣಪ್ಪ ಮುಂಜಿ, ಸಿದ್ದಪ್ಪ ಬೂದಿಹಾಳ, ಮಲ್ಲಪ್ಪ ಹಂಚನಾಳ, ಈರಣ್ಣ ಬ್ಯಾಕೋಡ, ಹಣಮಂತ ಪಾಟೀಲ, ವಾಸಿಂ ವಾಲಿಕಾರ, ಅಪ್ಪಣ್ಣ ಕಲ್ಲೂರ, ಭೀಮಣ್ಣ ಭರಮಣ್ಣ, ಬೀರಪ್ಪ ವಗ್ಗಿ, ಮಲ್ಲಪ್ಪ ಬೇವನೂರ, ಸಿದ್ದಣ್ಣ ಕಿಣಗಿ, ಪರಸು ಬಿಸನಾಳ, ಮಹಮ್ಮದ ವಾಲಿಕಾರ, ರೇವಪ್ಪ ಹೊರ್ತಿ, ಧರೆಪ್ಪ ಕೆಂಗನಾಳ ಇತರರಿದ್ದರು.