

ಡಿ.ಎಂ. ಮಹೇಶ್ ದಾವಣಗೆರೆ: ಅಗ್ನಿಶಾಮಕ ದಳದ ಜಾಗೃತಿ ಕಾರ್ಯಕ್ರಮಗಳ ನಡುವೆಯೂ ಬೆಂಕಿ ದುರಂತಗಳು ನಿಂತಿಲ್ಲ. ವರ್ಷದಿಂದ ವರ್ಷಕ್ಕೆ ಅವಘಡಗಳಷ್ಟೇ ಹಾನಿ ಪ್ರಮಾಣವೂ ಹೆಚ್ಚುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿ ಪ್ರಕರಣಗಳು ಏರುಮುಖದಲ್ಲಿವೆ.
2021ನೇ ಸಾಲಿನಲ್ಲಿ 471, 2022ರಲ್ಲಿ 468 ಅಗ್ನಿ ದುರಂತ ವರದಿಯಾಗಿದ್ದವು. 2023ರ ಮೂರು ತಿಂಗಳಲ್ಲೇ 468 ಅವಘಡಗಳು ವರದಿಯಾಗಿವೆ. ಹುಲ್ಲಿನ ಬಣವೆ, ಕಬ್ಬಿನ ಗದ್ದೆ, ತೋಟಗಳಲ್ಲಿ ಈ ಬಾರಿ ಹೆಚ್ಚಿನ ಅನಾಹುತವಾಗಿದ್ದು ಇದಕ್ಕೆ ಏರಿಕೆಯಾದ ಬಿಸಿಲಿನ ತಾಪವೇ ಕಾರಣ ಎನ್ನಲಾಗಿದೆ. ಕಳೆದ ವರ್ಷ ಅಗ್ನಿ ದುರಂತದಲ್ಲಿ ನಾಲ್ವರನ್ನು ಉಳಿಸಲಾಗಿದ್ದರೆ ಒಬ್ಬರು ಅಸು ನೀಗಿದ್ದಾರೆ. ಈ ಬಾರಿ ಐವರ ಪ್ರಾಣ ಉಳಿದಿದೆ.ಇತರೆ ರಕ್ಷಣಾ ಕಾರ್ಯದ ಕರೆಗಳಲ್ಲಿ 2022ರಲ್ಲಿ 70 ಜನರನ್ನು ರಕ್ಷಿಸಲಾಗಿದೆ. 27 ಜನ ಮೃತಪಟ್ಟರೆ 4 ಜಾನುವಾರು ಸಾವಿಗೀಡಾಗಿವೆ. 2023ರಲ್ಲಿ ಮೂವರ ಪ್ರಾಣ ರಕ್ಷಣೆಯಾಗಿದ್ದರೆ 6 ಮಂದಿ ಮೃತರಾಗಿದ್ದು ಒಂದು ಜಾನುವಾರು ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2021ರಲ್ಲಿ 3.75 ಕೋಟಿ ರೂ. ಮೊತ್ತದ ಆಸ್ತಿ ನಷ್ಟಕ್ಕೀಡಾಗಿದ್ದರೆ, ಅಗ್ನಿಶಾಮಕ ದಳದ ಕಾರ್ಯಾಚರಣೆಯಿಂದಾಗಿ 6.75 ಕೋಟಿ ರೂ. ಹಾನಿ ತಗ್ಗಿದೆ. 2022ರಲ್ಲಿ 4.32 ಕೋಟಿ ರೂ. ಆಸ್ತಿ ಹಾನಿಯಾಗಿದ್ದರೆ, 16.35 ಕೋಟಿ ರೂ.ಗಳಷ್ಟು ಆಸ್ತಿ ಉಳಿಸಲಾಗಿದೆ.
2023ರ ಮೂರು ತಿಂಗಳವಧಿಯಲ್ಲಿ 3.36 ಕೋಟಿ ರೂ.ಗಳ ನಷ್ಟವಾಗಿದೆ. ಆದರೆ, 90.41 ಕೋಟಿ ರೂ. ಆಸ್ತಿ ಉಳಿಸಲಾಗಿದೆ ಎಂಬುದೇ ಅಚ್ಚರಿ ಸಂಗತಿ! ಮಾರ್ಚ್ ತಿಂಗಳಲ್ಲಿ 177 ಅಗ್ನಿ ದುರಂತ ವರದಿಯಾಗಿವೆ.
2022ರ ಅಕ್ಟೋಬರ್ 18ರಂದು ಹರಿಹರ ತಾಲೂಕು ಕೊಂಡಜ್ಜಿಯ ಪಬ್ಲಿಕ್ ಶಾಲೆಯಲ್ಲಿ ಜೇನ್ನೊಣಗಳ ಹಾವಳಿ ಕಂಡುಬಂದಿತ್ತು. ಆಗ ಆ್ಯಸ್‌ಬೂಸ್ಟರ್ ಸೂಟ್ ಧರಿಸಿದ್ದ ವರು ಜಲವಾಹನದ ಏಣಿ (ಲ್ಯಾಡರ್) ಮೂಲಕ ಕಟ್ಟಡ ಏರಿ ಅಲ್ಲಿದ್ದ ಸುಮಾರು 50 ಮಕ್ಕಳನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು. ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಇಲಾಖೆ ಈ ರಕ್ಷಣಾ ಕಾರ್ಯಕ್ಕೆ ಪ್ರಶಂಸಿಸಿ ಬಹುಮಾನ ಘೋಷಿಸಿದ್ದು ಗಮನಾರ್ಹ.
ದಾವಣಗೆರೆ ಸೇರಿ ಐದು ತಾಲೂಕು ಕೇಂದ್ರಗಳಲ್ಲಿ ಅಗ್ನಿಶಾಮಕ ಠಾಣೆಗಳಿದ್ದು ಅಧಿಕಾರಿಗಳು, ಸಿಬ್ಬಂದಿ ಸೇರಿ 150 ಮಂದಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಒಟ್ಟು 16 ಜಲವಾಹನ, 1 ಜಲ ಲಾರಿ, 1 ವಾಟರ್ ಬೋಜರ್, ಹಾಗೂ 1 ರಕ್ಷಣಾ ವಾಹನವಿದೆ. ಇಲಾಖೆ ಹಾಗೂ ಸ್ಮಾರ್ಟ್‌ಸಿಟಿ ವತಿಯಿಂದಲೂ ಕೆಲವು ವಾಹನಗಳು ದೊರೆತಿವೆ.
ರಕ್ಷಣಾ ವಾಹನದಲ್ಲಿ ಅತ್ಯಾಧುನಿಕ ಯಂತ್ರ, ಆಕ್ಸಿಜನ್, ರಬ್ಬರ್(ಒಬಿಎಂ) ಬೋಟ್, ಸೂಟುಗಳ ಸೌಲಭ್ಯವಿವೆ. ಪೋರ್ಟಬಲ್ ಪಂಪ್, ಪೆಟ್ರೋಲ್ ಆಪರೇಟರ್, ವುಡ್ ಕಟ್ಟರ್ ಇತ್ಯಾದಿ ಅನುಕೂಲತೆ ಕಲ್ಪಿಸಲಾಗಿದೆ. ಏ.14ರಿಂದ ಆಗ್ನಿಶಾಮಕ ಸೇವಾ ಸಪ್ತಾಹ ಆಚರಿಸುತ್ತಿದ್ದು ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳಿಗೆ ಅಗ್ನಿ ತಡೆ ಪ್ರಾತ್ಯಕ್ಷಿಕೆ ಹಾಗೂ ಉಪನ್ಯಾಸ ನೀಡಲಾಗುವುದು. ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು ಸಂಪರ್ಕಿಸಿ ಉಪಯೋಗ ಪಡೆಯಬೇಕು ಎನ್ನುತ್ತಾರೆ ಅಧಿಕಾರಿಗಳು.
ಬಿಸಿಲಿನ ತಾಪದಿಂದಾಗಿ ಈ ಬಾರಿ ಅಗ್ನಿ ಅನಾಹುತಗಳು ಹೆಚ್ಚಿವೆ. ನಾಗರಿಕರು ಜಾಗರೂಕ ಕ್ರಮಗಳನ್ನು ಅನುಸರಿಸಬೇಕು. ಬೆಂಕಿ ಅವಘಡಗಳು ಕಂಡುಬಂದಾಗ ಅಗ್ನಿಶಾಮಕ ಠಾಣೆಗೆ ಸರಿಯಾದ ವಿವರಗಳನ್ನು ನೀಡಿ ಸಕಾಲಿಕವಾಗಿ ಅಗ್ನಿ ನಂದಿಸಲು ಸಾರ್ವಜನಿಕರು ನೆರವು ನೀಡಬೇಕು.ಬಸವಪ್ರಭು ಶರ್ಮ, ದಾವಣಗೆರೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ.